ನವದೆಹಲಿ, ಜ.12 (DaijiworldNews/AA): ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಕ್ರೌಡ್ ಫಂಡಿಂಗ್ ಅಭಿಯಾನವನ್ನು ದೆಹಲಿ ಸಿಎಂ ಅತಿಶಿ ಅವರು ಪ್ರಾರಂಭಿಸಿದ್ದು, ಚುನಾವಣೆಗೆ ದೆಹಲಿ ಜನತೆಯ ನೆರವು ಕೋರಿದ್ದಾರೆ.

ನನಗೆ ಚುನಾವಣೆಗೆ ಸ್ಪರ್ಧಿಸಲು ಹಣ ಬೇಕು. ಚುನಾವಣೆಗೆ ಸ್ಪರ್ಧಿಸಲು 40 ಲಕ್ಷ ರೂ. ಬೇಕಾಗಿದ್ದು, ನನ್ನ ಕ್ರೌಡ್ಫಂಡಿಂಗ್ ಅಭಿಯಾನವನ್ನು ದಯವಿಟ್ಟು ಬೆಂಬಲಿಸಿ ಎಂದು ಸಿಎಂ ಅತಿಶಿ ಮನವಿ ಮಾಡಿಕೊಂಡಿದ್ದಾರೆ.
ನಾವು ಕೈಗಾರಿಕೋದ್ಯಮಿಗಳಿಂದ ದೇಣಿಗೆ ತೆಗೆದುಕೊಳ್ಳುವುದಿಲ್ಲ. ಸಾರ್ವಜನಿಕರ ದೇಣಿಗೆಯಿಂದ ಚುನಾವಣೆಗೆ ಸ್ಪರ್ಧಿಸುತ್ತೇವೆ ಎಂದಿದ್ದಾರೆ. athishi.aamaadmiparty.org ಹೆಸರಿನ ಲಿಂಕ್ ಅನ್ನು ಬಿಡುಗಡೆ ಮಾಡಿರುವ ಅವರು, ನಾಯಕ ಸಾರ್ವಜನಿಕ ದೇಣಿಗೆಯೊಂದಿಗೆ ಚುನಾವಣೆಗೆ ಸ್ಪರ್ಧಿಸಿದರೆ ಆಗ ರಚನೆಯಾಗುವ ಸರ್ಕಾರ ಅವರ ಪರವಾಗಿ ಕೆಲಸ ಮಾಡುತ್ತದೆ ಮತ್ತು ಕೈಗಾರಿಕೋದ್ಯಮಿಗಳ ಹಣದಿಂದ ಸ್ಪರ್ಧಿಸಿದರೆ ಅದು ಅವರಿಗೆ ಕೆಲಸ ಮಾಡುತ್ತದೆ ಎಂದು ತಿಳಿಸಿದ್ದಾರೆ.
ಆಮ್ ಆದ್ಮಿ ಪಕ್ಷ ಸ್ಥಾಪನೆಯಾದಾಗಿನಿಂದ ದೆಹಲಿಯ ಜನಸಾಮಾನ್ಯರು ಆಮ್ ಆದ್ಮಿ ಪಕ್ಷವನ್ನು ಬೆಂಬಲಿಸಲು ಮತ್ತು ಚುನಾವಣೆಯಲ್ಲಿ ಸ್ಪರ್ಧಿಸಲು ದೇಣಿಗೆ ನೀಡುತ್ತಿದ್ದಾರೆ. ನಾವು ದೊಡ್ಡ ಉದ್ಯಮಿಗಳಿಂದ ದೇಣಿಗೆ ಪಡೆಯದ ಕಾರಣ ಆಮ್ ಆದ್ಮಿ ಪಕ್ಷದ ಪ್ರಾಮಾಣಿಕತೆಯ ರಾಜಕಾರಣ ಸಾಧ್ಯವಾಗಿದೆ. ಬಿಜೆಪಿ ಹಣದಿಂದ ಅಧಿಕಾರ ಮತ್ತು ಅಧಿಕಾರದಿಂದ ಹಣವನ್ನು ಸಂಗ್ರಹಿಸುತ್ತದೆ ಎಂದರು.