ರಾಯಚೂರು, ಜ.12 (DaijiworldNews/AA): ರಾಜ್ಯದ ಜನರ ಆಶೀರ್ವಾದ ಇರೋವರೆಗೂ ಯಾರೂ ಸಿದ್ದರಾಮಯ್ಯ ಅವರನ್ನ ಏನು ಮಾಡಲೂ ಆಗಲ್ಲ. ಬಿಜೆಪಿ ಜೆಡಿಎಸ್ನವರು ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಅವರ ಆರೋಪಗಳಲ್ಲಿ ಹುರುಳಿಲ್ಲ, ಯಾರೂ ತಲೆಕೆಡೆಸಿಕೊಳ್ಳಬೇಕಿಲ್ಲ ಎಂದು ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ.

ರಾಯಚೂರಿನ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಕ್ರಾಂತಿ ಆಗಬೇಕು ಎಂದರೆ ಹಿಂದುಳಿದ ವರ್ಗದವರು, ತುಳಿತಕ್ಕೊಳಪಟ್ಟವರು ಸಿಎಂ ಸಿದ್ದರಾಮಯ್ಯರನ್ನ ಬೆಂಬಲಿಸಿ. ಸಂವಿಧಾನವನ್ನು ಜೀವನ ಧ್ಯೇಯವನ್ನಾಗಿ ಇಟ್ಟುಕೊಂಡು ಸಿದ್ದರಾಮಯ್ಯ ರಾಜ್ಯವನ್ನು ಆಳುತ್ತಿದ್ದಾರೆ. ರಾಜ್ಯದಲ್ಲಿರೋ 60 ಲಕ್ಷದಲ್ಲಿ 90% ನಷ್ಟು ಜನ, ಸಿದ್ದರಾಮಯ್ಯನವರ ಜೊತೆಗಿದ್ದೀರಿ. ಕುರುಬ ಸಮುದಾಯದ ಜೊತೆ ಕೆಳವರ್ಗದವರು, ದಲಿತರು, ಮೇಲ್ವರ್ಗದ ಬಡವರು ಸಿದ್ದರಾಮಯ್ಯರನ್ನ 2ನೇ ಬಾರಿ ಸಿಎಂ ಮಾಡಿದ್ದಾರೆ. ಇದನ್ನೇ ಕನಕದಾಸರು ಹೇಳಿದ್ದು. ಕುಲಕುಲ ಅಂತ ಹೊಡೆದಾಡದಿರಿ ಕುಲದ ಮೂಲವನ್ನೇನಾದರೂ ಬಲ್ಲೀರಾ ಎಂದರು.
ನಮ್ಮ ಹೈಕಮಾಂಡ್, ರಾಹುಲ್ ಗಾಂಧಿ, ಸೋನಿಯಾ ಮೇಡಂ, ಸುರ್ಜೇವಾಲಾ ಎಲ್ಲರೂ ಸಿದ್ದರಾಮಯ್ಯ ಪರ ಇದ್ದಾರೆ. ಯಾರೂ ಅನ್ಯಥಾ ಭಾವಿಸಬೇಡಿ. ಪ್ರಸ್ತುತ ಸಿದ್ದರಾಮಯ್ಯ ಅವರು ಸಿಎಂ ಇದ್ದಾರೆ. ಮುಂದೆಯೂ ಇರುತ್ತಾರೆ. ಸಿಎಂ ಬದಲಾವಣೆ ವಿಚಾರ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಈಗಾಗಲೇ ಯಾವುದೇ ಬದಲಾವಣೆ ಅವಕಾಶ ಇಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಸಿದ್ದರಾಮಯ್ಯ ಅವರ ನಾಯಕತ್ವದಲ್ಲಿನ ಸರ್ಕಾರ ಜನಗಳ ಒಳ್ಳೆದಕ್ಕೆ ಉಪಯೋಗಿಸಿಕೊಳ್ಳುತ್ತೇವೆ ಎಂದು ಹೇಳಿದರು.