ಬೆಂಗಳೂರು, ಜೂ 10(Daijiworld News/SM): ರಾಜ್ಯದ ದೋಸ್ತಿ ಸರಕಾರದಲ್ಲಿ ನಿರ್ಧಾರವಾಗಿದ್ದ ಸಂಪುಟ ವಿಸ್ತರಣೆ ವಿಚಾರ ಮತ್ತೆ ಮುಂದೂಡಲ್ಪಟ್ಟಿದೆ. ಜೂನ್ 12ರಂದು ಸಂಪುಟ ವಿಸ್ತರಣೆಗೆ ಸಿಎಂ ಹಾಗೂ ಪಕ್ಷ ನಿರ್ಧರಿಸಿತ್ತು.
ಹಿರಿಯ ಸಾಹಿತಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್ ಅವರ ನಿಧನದಿಂದಾಗಿ ಸಂಪುಟ ವಿಸ್ತರಣಾ ವಿಚಾರವನ್ನು ಮುಖ್ಯಮಂತ್ರಿಗಳು ಮುಂದೂಡಿದ್ದರು. ಇದೀಗ ಮುಂದಿನ ದಿನಾಂಕವನ್ನು ಕೂಡ ಫೈನಲ್ ಮಾಡಲಾಗಿದೆ.
ಸೋಮವಾರ ಸಂಜೆ ಸಂಪುಟ ವಿಸ್ತರಣೆ ದಿನಾಂಕ ಮತ್ತು ಸಮಯ ಅಂತಿಮವಾಗಿದೆ. ಜೂನ್ 14ರ ಶುಕ್ರವಾರ ಮಧ್ಯಾಹ್ನ 1 ಗಂಟೆಗೆ ಸಂಪುಟ ವಿಸ್ತರಣೆ ನಡೆಯಲಿದೆ. ರಾಜಭವನ ದಿನಾಂಕ ಮತ್ತು ಸಮಯವನ್ನು ಖಚಿತಪಡಿಸಿದೆ. ರಾಜ್ಯದಲ್ಲಿ ನಡೆಯುತ್ತಿರುವ ಮೂರು ದಿನಗಳ ಶೋಕಾಚರಣೆ ಹಿನ್ನೆಲೆ ಸಂಪುಟ ವಿಸ್ತರಣೆಯ ದಿನಾಂಕವನ್ನು ಮುಂದೂಡಲಾಗಿದೆ.