ನವದೆಹಲಿ, ಜೂ11(Daijiworld News/SS): ಆಂಧ್ರಪ್ರದೇಶದ ನೂತನ ರಾಜ್ಯಪಾಲರಾಗಿ ಸುಷ್ಮಾ ಸ್ವರಾಜ್ ನೇಮಕಗೊಂಡಿರುವ ಸುದ್ದಿ ವೈರಲ್ ಆಗತೊಡಗಿದೆ. ಬಿಜೆಪಿಯ ಹಿರಿಯ ನಾಯಕಿ, ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಆಂಧ್ರಪ್ರದೇಶಕ್ಕೆ ನೂತನ ರಾಜ್ಯಪಾಲರಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಆದರೆ ಈಗ ಈ ಬಗ್ಗೆ ಸ್ವತಃ ಸುಷ್ಮಾ ಸ್ವರಾಜ್ ಟ್ವೀಟ್ ಮಾಡುವ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ಆಂಧ್ರಪ್ರದೇಶದ ರಾಜ್ಯಪಾಲರಾಗಿ ನೇಮಕ ವಿಚಾರವಾಗಿ ಪ್ರತಿಕ್ರಿಯಿಸಿರುವ ಸುಷ್ಮಾ ಸ್ವರಾಜ್, ಆಂಧ್ರಪ್ರದೇಶ ರಾಜ್ಯಪಾಲೆಯಾಗಿ ನೇಮಕ ಆಲ್ಲ, ನೇಮಕ ವಿಚಾರ ಎಲ್ಲಾ ಸುಳ್ಳು ಸುದ್ದಿ ಎಂದು ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದ್ದಾರೆ.
ಕೇಂದ್ರ ಸಚಿವ ಹರ್ಷವರ್ಧನ್ ಸಿಂಗ್ ಸೋಮವಾರ ರಾತ್ರಿ 9 ಗಂಟೆಗೆ ಸುಷ್ಮಾ ಸ್ವರಾಜ್ ಅವರಿಗೆ ಟ್ವಿಟರ್ ನಲ್ಲಿ ಅಭಿನಂದನೆ ತಿಳಿಸಿದ್ದರು. ಆಂಧ್ರಪ್ರದೇಶದ ನೂತನ ರಾಜ್ಯಪಾಲರಾಗಿ ಆಯ್ಕೆಯಾಗಿರುವ ಸುಷ್ಮಾ ದೀದಿಗೆ ಅಭಿನಂದನೆಗಳು ನಿಮ್ಮ ಸುದೀರ್ಘ ರಾಜಕೀಯ ಅನುಭವ ಅಲ್ಲಿಯ ಜನರಿಗೆ ಅನುಕೂಲ ಆಗಲಿದೆ ಎಂದು ಶುಭ ಹಾರೈಸಿದ್ದರು.
ಲೋಕಸಭಾ ಚುನಾವಣೆ ಕಣದಿಂದ ದೂರ ಉಳಿದಿದ್ದ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಕರ್ನಾಟಕದ ರಾಜ್ಯಪಾಲರನ್ನಾಗಿ ನೇಮಕ ಮಾಡುವ ಸಾಧ್ಯತೆಗಳ ಬಗ್ಗೆಯೂ ಕೆಲವು ದಿನಗಳ ಹಿಂದೆ ವರದಿ ಪ್ರಕಟವಾಗಿತ್ತು.