ಕೋಲ್ಕತ್ತ, ಜ.18 (DaijiworldNews/AA): ನಗರದ ಆರ್.ಜಿ. ಕರ್ ವೈದ್ಯಕೀಯ ಆಸ್ಪತ್ರೆಯಲ್ಲಿ ವೈದ್ಯ ವಿದ್ಯಾರ್ಥಿನಿಯ ಮೇಲೆ ನಡೆದ ಅತ್ಯಾಚಾರ ಹಾಗೂ ಆಕೆಯ ಕೊಲೆ ಪ್ರಕರಣದ ಬಹು ನಿರೀಕ್ಷಿತ ತೀರ್ಪು ಇಂದು ಪ್ರಕಟವಾಗಲಿದೆ.

2024ರ ಆಗಸ್ಟ್ 9ರಂದು ಕೋಲ್ಕತ್ತದ ಆರ್.ಜಿ. ಕರ್ ವೈದ್ಯಕೀಯ ಆಸ್ಪತ್ರೆಯಲ್ಲಿ ವೈದ್ಯ ವಿದ್ಯಾರ್ಥಿನಿಯ ಮೇಲೆ ನಡೆದ ಅತ್ಯಾಚಾರ ಹಾಗೂ ಆಕೆಯ ಕೊಲೆ ಪ್ರಕರಣವು ದೇಶವನ್ನು ಬೆಚ್ಚಿಬೀಳಿಸಿತ್ತು. ಸ್ಥಳೀಯ ಪೊಲೀಸರಿಗೆ ಸ್ವಯಂ ಸೇವಕನಂತೆ ಕೆಲಸ ಮಾಡುತ್ತಿದ್ದ ಸಂಜಯ್ ರಾಯ್ ಎಂಬಾತ ಈ ಪ್ರಕರಣದ ಮುಖ್ಯ ಆರೋಪಿ ಎಂದು ಕೆಂದ್ರ ತನಿಖಾ ದಳ ತಿಳಿಸಿದೆ.
ಸಿಯಾಲ್ಟಾ ನ್ಯಾಯಾಲಯದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಅಕ್ಟೋಬರ್ 7 ರಂದು ದೋಷಾರೋಪಣೆ ಪತ್ರ ಸಲ್ಲಿಸಿದ ನಂತರ ಪ್ರಕರಣದ ವಿಚಾರಣೆ ಪ್ರಾರಂಭವಾಗಿತ್ತು. ಇದೀಗ ನ್ಯಾಯಾಧೀಶರಾದ ಅನಿರ್ಬನ್ ದಾಸ್ ಅವರು ಪ್ರಕರಣದ ವಿಚಾರಣೆ ಆರಂಭಿಸಿದ 57 ದಿನಗಳ ಬಳಿಕ ತೀರ್ಪು ಪ್ರಕಟವಾಗಲಿದೆ.
ಆಸ್ಪತ್ರೆಯ ಸೆಮಿನಾರ್ ಹಾಲ್ನಲ್ಲಿ ವೈದ್ಯ ವಿದ್ಯಾರ್ಥಿನಿಯ ಮೃತದೇಹ ದೊರೆತ ಮರುದಿನ ಅಂದರೆ ಆಗಸ್ಟ್ 10ರಂದು ಆರೋಪಿ ಸಂಜಯ್ ರಾಯ್ನನ್ನು ಕೋಲ್ಕತ್ತ ಪೊಲೀಸರು ಬಂಧಿಸಿದ್ದರು. ನಂತರ ಕೋಲ್ಕತ್ತ ಹೈಕೋರ್ಟ್ ಈ ಪ್ರಕರಣವನ್ನು ಸಿಬಿಐಗೆ ವರ್ಗಾವಣೆ ಮಾಡಿತ್ತು.
ಈ ಪ್ರಕರಣದ ವಿಚಾರಣೆಯು ನವೆಂಬರ್ 12ರಂದು ಆರಂಭವಾಗಿದ್ದು, ಒಟ್ಟು 50 ಸಾಕ್ಷಿಗಳ ಹೇಳಿಕೆಗಳನ್ನು ಪಡೆಯಲಾಗಿದೆ. ಆರೋಪಿ ಸಂಜಯ್ ರಾಯ್ ವಿಚಾರಣೆಯು ಜನವರಿ 9ರಂದು ಕೊನೆಗೊಂಡಿತ್ತು.