ಕೋಲ್ಕತ್ತಾ, ಜ.18 (DaijiworldNews/AA): ಬಹು ನಿರೀಕ್ಷಿತ ಆರ್.ಜಿ. ಕರ್ ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ, ಕೊಲೆ ಪ್ರಕರಣದ ತೀರ್ಪು ಇಂದು ಪ್ರಕಟವಾಗಿದ್ದು, ಬಂಧಿತ ಸಂಜಯ್ ರಾಯ್ನನ್ನು ದೋಷಿ ಎಂದು ಹೇಳಿ ಕೋರ್ಟ್ ತಿಳಿಸಿದೆ.

ಪ್ರಕರಣದ ವಿಚಾರಣೆ ನಡೆಸಿದ ಕೋಲ್ಕತ್ತಾ ಸೆಷನ್ಸ್ ಕೋರ್ಟ್ ನ್ಯಾಯಾಧೀಶ ಅನಿರ್ಬನ್ ದಾಸ್ ಅವರು ಬಂಧಿತ ಸಂಜಯ್ ರಾಯ್ನನ್ನು ದೋಷಿ ಎಂದು ತೀರ್ಪು ನೀಡಿದ್ದಾರೆ. ಅತ್ಯಾಚಾರ, ಕೊಲೆ ಸೆಕ್ಷನ್ ಗಳಲ್ಲಿ ಅಪರಾಧಿ ಎಂದು ಕೋರ್ಟ್ ತೀರ್ಪು ನೀಡಿದ್ದು ಜ.20ರಂದು ಶಿಕ್ಷೆಯ ಪ್ರಮಾಣವನ್ನು ಪ್ರಕಟ ಮಾಡಲಿದೆ. ಪ್ರಕರಣದ ವಿಚಾರಣೆ ಆರಂಭಿಸಿದ 57 ದಿನಗಳ ಬಳಿಕ ಕೋರ್ಟ್ ಅಪರಾಧಿ ಎಂದು ತೀರ್ಪು ಪ್ರಕಟಿಸಿರುವುದು ವಿಶೇಷ.
ಇನ್ನು ನ್ಯಾಯಾಧೀಶರು ತೀರ್ಪು ಪ್ರಕಟಿಸುತ್ತಿದ್ದಂತೆ ದೋಷಿಯಾಗಿರುವ ಸಂಜಯ್ ರಾವ್ ನಾನು ಅಮಾಯಕ. ಯಾವುದೇ ಕೃತ್ಯ ಎಸಗಿಲ್ಲ ಎಂದು ಹೇಳಿ ತನ್ನ ಮೇಲಿದ್ದ ಆರೋಪಗಳನ್ನು ನಿರಾಕರಿಸಿದ್ದಾನೆ. ಪ್ರಕರಣದ ತೀರ್ಪು ಪ್ರಕಟದ ಹಿನ್ನೆಲೆ ಇಂದು ನ್ಯಾಯಾಲಯದ ಕೋಣೆಗೆ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಸುಮಾರು 300ಕ್ಕೂ ಹೆಚ್ಚು ಪೊಲೀಸರನ್ನು ಕೋರ್ಟ್ ಆವರಣದ ಸುತ್ತ ನಿಯೋಜನೆ ಮಾಡಲಾಗಿತ್ತು.