ಕೊಪ್ಪಳ,ಜ.19 (DaijiworldNews/AK): ರಾಜ್ಯದಲ್ಲಿ ಅತಿಹೆಚ್ಚು ಭ್ರಷ್ಟಾಚಾರ ಮಾಡಿದ ಮುಖ್ಯಮಂತ್ರಿಗಳು ಅಂದರೆ ಸಿದ್ದರಾಮಯ್ಯನವರು, ಭ್ರಷ್ಟಾಚಾರದಿಂದ ಸಾಕಷ್ಟು ಬೇನಾಮಿ ಆಸ್ತಿಯನ್ನು ಮಾಡಿಕೊಂಡಿದ್ದಾರೆ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದ್ದಾರೆ.

ಮಾಧ್ಯಮದೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಹಿಂದುಳಿದ ನಾಯಕ ಎಂದು ಹೇಳಿಕೊಂಡು ಅಧಿಕಾರ ಪಡೆದು ರಾಜ್ಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಭ್ರಷ್ಟಾಚಾರ ಮಾಡಿದ್ದಾರೆ. ರಾಜ್ಯದಲ್ಲಿನ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ಸಿದ್ದರಾಮಯ್ಯನವರು ಅತಿಹೆಚ್ಚು ಭ್ರಷ್ಟಾಚಾರ ಮಾಡಿದ ಸಿಎಂ ಆಗಿದ್ದಾರೆ ಎಂದರು.
ರಾಜ್ಯದಲ್ಲಿ ಮುಡಾ ಹಗರಣದಲ್ಲಿ ಕೇವಲ 140 ಸೈಟ್ಗಳು ಮಾತ್ರವಲ್ಲದೆ ಸಾವಿರಕ್ಕೂ ಅಧಿಕ ಸೈಟ್ಗಳನ್ನು ಬೇನಾಮಿ ಆಸ್ತಿಯಾಗಿ ಮಾಡಿಕೊಂಡಿದ್ದಾರೆ. ಮುಡಾದಲ್ಲಿ ಸೈಟ್ ಖರೀದಿ ಮಾಡಿರುವವರನ್ನು ವಿಚಾರಣೆ ಮಾಡಿದರೆ ಸತ್ಯಾಂಶ ಹೊರಬರಲಿದೆ ಎಂದರು.
ಜನರಲ್ಲಿ ಹಿಂದುಳಿದ ನಾಯಕ ಎಂದು ನಂಬಿಕೆಯನ್ನು ಹುಟ್ಟಿಸಿಕೊಂಡು ಮಾಡಿರುವ ಭ್ರಷ್ಟಾಚಾರ ಮುಡಾ ಹಗರಣದಿಂದ ಹೊರ ಬಂದಿದೆ ಎಂದು ಕಿಡಿಕಾರಿದರು.