ಬೆಂಗಳೂರು,ಜ.22(DaijiworldNews/AK): ಕಾಂಗ್ರೆಸ್ ಸಮಾವೇಶದಲ್ಲಿ ನಿನ್ನೆ ಪ್ರಿಯಾಂಕ ಗಾಂಧಿಯವರನ್ನು ಕಿತ್ತೂರು ರಾಣಿ ಚನ್ನಮ್ಮನಿಗೆ ಹೋಲಿಸಿದ್ದಾರೆ. ಇದೊಂದು ರೀತಿಯ ಭಟ್ಟಂಗಿತನದ ಪರಮಾವಧಿ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವರು ಟೀಕಿಸಿದ್ದಾರೆ.
ಇಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, ಕಿತ್ತೂರು ರಾಣಿ ಚನ್ನಮ್ಮ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ವೀರರಾಣಿ. ಅವರನ್ನು ಪ್ರಿಯಾಂಕ ಗಾಂಧಿಗೆ ಹೋಲಿಕೆ ಮಾಡುವುದು ಅಥವಾ ಕಿತ್ತೂರು ರಾಣಿ ಚನ್ನಮ್ಮರಿಗೆ ಅವಮಾನ ಮಾಡುವುದು ಒಂದೇ ಆಗಿದೆ ಎಂದು ವಿಶ್ಲೇಷಿಸಿದರು.
ಹೊಗಳಿಕೆಯ ಭರದಲ್ಲಿ ಮಾನಸಿಕ ಗುಲಾಮಗಿರಿಯ ಪ್ರದರ್ಶನವನ್ನು ಮಾಡಿರುವುದಾಗಿ ಅನಿಸುತ್ತದೆ ಎಂದು ತಿಳಿಸಿದರು.ದೇಶಕ್ಕಾಗಿ ತಮ್ಮ ಬದುಕನ್ನು ಸಮರ್ಪಿಸಿಕೊಂಡ ಕಿತ್ತೂರು ರಾಣಿ ಚನ್ನಮ್ಮ ಎಲ್ಲಿ? ಕುಟುಂಬದ ಕೈಯಲ್ಲಿ ಅಧಿಕಾರ ಇರಬೇಕು ಎನ್ನುವಂಥ ಈ ಗಾಂಧಿ ಎಲ್ಲಿ ಎಂದು ಪ್ರಶ್ನಿಸಿದರು. ಎರಡಕ್ಕೂ ಹೋಲಿಕೆ ಮಾಡಿದರೆ, ಅದು ಒಂದು ರೀತಿಯ ಅಕ್ಷಮ್ಯ ಅಪರಾಧ ಎಂದು ಆಕ್ಷೇಪಿಸಿದರು. ಈ ಮೂಲಕ ರಾಷ್ಟ್ರೀಯ ವ್ಯಕ್ತಿತ್ವಕ್ಕೆ ಅಪಮಾನ ಮಾಡುವ ಕೆಲಸವನ್ನು ಮಲ್ಲಿಕಾರ್ಜುನ ಖರ್ಗೆಯವರು ಮಾಡಿದ್ದಾರೆ ಎಂದು ಟೀಕಿಸಿದರು.
ಕನ್ನಡ ನಾಡನ್ನೂ ಅವಮಾನಿಸಿದ್ದು, ಈ ಸಂಬಂಧ ಅವರು ನಾಡಿನ ಜನರ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.ಕಾಂಗ್ರೆಸ್ ಅಧಿವೇಶನದಲ್ಲಿ ಗಾಂಧೀಜಿ ಅವರ ಸ್ಮರಣೆ ಮಾಡಿದ್ದಾರೆ. ಗಾಂಧೀಜಿ ಅವರ ಕಡೆಯ ಮಾತು ‘ಕಾಂಗ್ರೆಸ್ ವಿಸರ್ಜಿಸಿ’ ಎಂಬುದಾಗಿತ್ತು. ಅದನ್ನೂ ಕಾಂಗ್ರೆಸ್ಸಿಗರು ನೆನಪು ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು. ಮಹಾತ್ಮ ಗಾಂಧಿಯವರು ಸ್ವಾತಂತ್ರ್ಯ ಬಂದ ಮೇಲೆ ಭ್ರಷ್ಟಾಚಾರ ನಡೆಸಿ ಎಂದು ಕಾಂಗ್ರೆಸ್ಸಿನವರಿಗೆ ಆದೇಶ ಮಾಡಿಲ್ಲ. ಕರ್ನಾಟಕ ಕಾಂಗ್ರೆಸ್ ಭ್ರಷ್ಟಾಚಾರ ಮಾಡುತ್ತಿದೆ ಎಂದು ಟೀಕಿಸಿದರು.
ಭ್ರಷ್ಟಾಚಾರ ಮಾಡಲು ಮಹಾತ್ಮ ಗಾಂಧಿ ಹೇಳಿಕೊಟ್ಟಿಲ್ಲ; ಕಾಂಗ್ರೆಸ್ಸಿಗರು ಆತ್ಮಾವಲೋಕನ ಮಾಡಿಕೊಳ್ಳಬೇಕು. ನಾವು ಗಾಂಧೀಜಿಯವರ ಸ್ಮರಣೆ ಮಾಡುವಾಗ ಭ್ರಷ್ಟಾಚಾರಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು ಎಂಬುದಾಗಿ ಅವರು ಯೋಚಿಸಬೇಕಿತ್ತು ಎಂದು ತಿಳಿಸಿದರು.
ಸಂವಿಧಾನ, ಅಂಬೇಡ್ಕರರನ್ನೂ ನೆನಪಿಸಿಕೊಂಡಿದ್ದು ಒಳ್ಳೆಯದೇ. ಅವರು ಬದುಕಿದ್ದಾಗ ಎರಡು ಬಾರಿ ಕಾಂಗ್ರೆಸ್ಸಿನವರು ಸೋಲಿಸಿದ್ದರು. ಅಂಬೇಡ್ಕರರನ್ನು ಸೋಲಿಸಲು ಪ್ರಧಾನಿ ಜವಾಹರಲಾಲ್ ನೆಹರೂ ಅವರು ಪ್ರಚಾರಕ್ಕೆ ಬಂದಿದ್ದರು; ಅದಕ್ಕೂ ಸ್ವಲ್ಪ ಪ್ರಾಯಶ್ಚಿತ್ತ ಮಾಡಿಕೊಳ್ಳಿ ಎಂದು ಒತ್ತಾಯಿಸಿದರು.
ರಾಮಮಂದಿರ ನಿರ್ಮಾಣಗೊಂಡು ಪ್ರಾಣ ಪ್ರತಿಷ್ಠೆ ನಡೆದು ಒಂದು ವರ್ಷವಾಗಿದೆ. 5 ಶತಮಾನಗಳ ನಮ್ಮ ತುಡಿತ, ಹೋರಾಟ ಸಫಲವಾದ ಸಂದರ್ಭವಿದು. ಪ್ರಭು ಶ್ರೀರಾಮಚಂದ್ರನು ರಾಷ್ಟ್ರವನ್ನು ಬಲಗೊಳಿಸಲು ಎಲ್ಲರಿಗೂ ಶಕ್ತಿ ಕೊಡಲಿ ಎಂದು ಅವರು ಪ್ರಾರ್ಥಿಸಿದರು. ಇದರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಯೋಗದಾನವೂ ದೊಡ್ಡದಿದೆ; ಅವರಿಗೂ ಕೃತಜ್ಞತೆಗಳು ಎಂದು ನುಡಿದರು.