ಬೆಂಗಳೂರು,ಜ.24(DaijiworldNews/AK): ವಿಶ್ವವಿದ್ಯಾಲಯಗಳ ಒಟ್ಟು ಪಠ್ಯಕ್ರಮವನ್ನು ಪರಿಶೀಲಿಸುವ ನಿಟ್ಟಿನಲ್ಲಿ ರಾಜ್ಯಪಾಲರು ಇದರ ಕುರಿತು ವರದಿ ತರಿಸಿಕೊಳ್ಳಬೇಕು; ಎಲ್ಲ ವಿಶ್ವವಿದ್ಯಾಲಯಗಳ ಪಠ್ಯಕ್ರಮವನ್ನು ಪರಿಶೀಲಿಸಬೇಕು ಎಂದು ವಿಧಾನಪರಿಷತ್ತಿನ ಮಾಜಿ ಸದಸ್ಯ ಅರುಣ್ ಶಹಾಪುರ ಅವರು ಆಗ್ರಹಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಉನ್ನತ ಶಿಕ್ಷಣ ಪರಿಷತ್, ವಿವಾದಿತ ಅಂಶವಿರುವ ಪಠ್ಯಗಳ ಕುರಿತು ಪರಿಶೀಲಿಸಬೇಕು ಎಂದು ಒತ್ತಾಯಿಸಿದರು.ವಿವಾದಿತ ಅಂಶಗಳನ್ನು ಒಳಗೊಂಡ ಪಠ್ಯದ ಮೂಲಕ ಸಮಾಜವನ್ನು ವಿಭಜಿಸುವ ಮಾನಸಿಕತೆಗಳ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕು; ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಅವರು ಆಗ್ರಹಿಸಿದರು.
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಬಿ.ಎ. ಪ್ರಥಮ ಸೆಮಿಸ್ಟರ್ನ ಬೆಳಗು ಲೇಖನಗಳ ಸಂಗ್ರಹದ ಕನ್ನಡ ಪಠ್ಯಪುಸ್ತಕದಲ್ಲಿ ರಾಮಲಿಂಗಪ್ಪ ಟಿ.ಬೇಗೂರು ಅವರ ಬರಹದಲ್ಲಿ ರಾಷ್ಟ್ರವಾದದ ಆಚರಣೆಯ ಸುತ್ತಮುತ್ತ ಎಂಬ ವಿಷಯವನ್ನು ಪ್ರಸ್ತಾಪಿಸಲಾಗಿದೆ. ಅದರಲ್ಲಿ ಅತ್ಯಂತ ವಿವಾದಾತ್ಮಕ ಅಂಶಗಳಿವೆ ಎಂದು ಗಮನ ಸೆಳೆದರು.
ಬರಹಗಾರರ ಬಹಳ ಪೂರ್ವಾಗ್ರಹ ಪೀಡಿತ ವಿಚಾರಗಳನ್ನು ಇದರಲ್ಲಿ ಸೇರಿಸಿದ್ದಾರೆ. ರಾಷ್ಟ್ರವಾದದ ಆಚರಣೆಯ ಸುತ್ತಮುತ್ತ ಎಂಬ ವಿಷಯದಡಿ ರಾಷ್ಟ್ರವಾದವನ್ನೇ ಹೀಗಳೆಯುವ ಕೆಲಸ ಮಾಡಿದ್ದಾರೆ. ಹಿಂದೂ ಬಗ್ಗೆ ಕೆಟ್ಟದಾಗಿ ಚಿತ್ರಿಸಿದ್ದು, ಭಾರತ ಮಾತೆ ಎಂಬುದು ಕಲ್ಪನೆ ಎಂದಿದ್ದಾರೆ. ಈಕೆ ಹಿಂದೂ ಎಂಬ ಕಲ್ಪಿತ ಮಾತೆ ಎಂದು ತಿಳಿಸಿದ್ದನ್ನೂ ವಿವರಿಸಿದರು. ಬೋಲೋ ಭಾರತ್ ಮಾತಾಕಿ ಜೈ ಎಂಬುದನ್ನೂ ವಿರೋಧಿಸಿದ್ದಾರೆ ಎಂದು ಟೀಕಿಸಿದರು.
ವಿಶ್ವವಿದ್ಯಾಲಯ ಪಠ್ಯಪುಸ್ತಕ ವಾಪಸ್ ಪಡೆಯಲಿ
ವಿಶ್ವವಿದ್ಯಾಲಯದಲ್ಲಿ ಇದು ಬೌದ್ಧಿಕ ಭಯೋತ್ಪಾದಕತೆ ಎಂದ ಅರುಣ್ ಶಹಾಪುರ ಅವರು, ಇಲ್ಲಿನವರೆಗೆ ಪೊಲೀಸರು ಈ ವಿಷಯದಲ್ಲಿ ಯಾಕೆ ಮೊಕದ್ದಮೆ ಹೂಡಿಲ್ಲ? ಎಂದು ಕೇಳಿದರು. ಅವರ ಮೇಲೆ ಕ್ರಮ ಕೈಗೊಳ್ಳಿ; ಪಠ್ಯಪುಸ್ತಕವನ್ನು ವಾಪಸ್ ಪಡೆಯುವ ಕೆಲಸವನ್ನು ವಿಶ್ವವಿದ್ಯಾಲಯ ಮಾಡಬೇಕು ಎಂದು ಒತ್ತಾಯಿಸಿದರು.ಸರಕಾರ ಕ್ರಮ ಕೈಗೊಳ್ಳದೆ ಇದ್ದಲ್ಲಿ ಮಾನ್ಯ ಕುಲಾಧಿಪತಿಗಳಾದ ರಾಜ್ಯಪಾಲರು ಕ್ರಮ ಕೈಗೊಳ್ಳಲಿ ಎಂದು ಮನವಿ ಮಾಡಿದರು.