ಬೆಂಗಳೂರು,ಜ.24(DaijiworldNews/AK): ಅರಮನೆ ಆಸ್ತಿ ವಿಚಾರದಲ್ಲಿ ಸುಗ್ರೀವಾಜ್ಞೆ ಹೊರಡಿಸಲು ಇಂದಿನ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಕಾನೂನು ಸಚಿವ ಹೆಚ್.ಕೆ ಪಾಟೀಲ್ ಹೇಳಿದರು.

ವಿಧಾನಸೌಧದಲ್ಲಿಂದು ನಡೆದ ಸಂಪುಟ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅರಮನೆ ಆಸ್ತಿ ವಿಚಾರದಲ್ಲಿ ಸುಗ್ರೀವಾಜ್ಞೆ ಹೊರಡಿಸಲು ಸಂಪುಟ ಸಭೆಯಲ್ಲಿ ತೀರ್ಮಾನಿಸಿರುವುದಾಗಿ ತಿಳಿಸಿದರು.
1996 ರಲ್ಲಿ ಬೆಂಗಳೂರು ಅರಮನೆ ವ್ಯಾಪ್ತಿಯ 472 ಎಕರೆ ಭೂಮಿಯನ್ನ ಸರ್ಕಾರ ವಶಕ್ಕೆ ಪಡೆಯಲು ಒಟ್ಟು 11 ಕೋಟಿ ರೂ. ನಿಗದಿ ಪಡಿಸಿತ್ತು. ಅಂದು ಎಕರೆಗೆ 2.30 ಲಕ್ಷ ರೂ.ನಂತೆ ದರ ನಿಗದಿ ಮಾಡಲಾಗಿತ್ತು. ಆದ್ರೆ ರಾಜಮನೆತನ ಇದನ್ನ ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿತ್ತು ಎಂದು ಸಚಿವರು ತಿಳಿಸಿದರು.
ಇಂದಿನ ಮಾರುಕಟ್ಟೆ ದರ ಎಕರೆಗೆ 200 ಕೋಟಿ ರೂ. ಆಗುತ್ತದೆ. ರಸ್ತೆ ಅಗಲಿಕರಣಕ್ಕೆ ಬೇಕಾದ 15 ಎಕರೆ 36 ಗುಂಟೆ ಜಾಗವನ್ನೇ ವಶಕ್ಕೆ ಪಡೆಯುವುದಾದರೆ ಎಕರೆಗೆ 200 ಕೋಟಿ ಬೆಲೆ ಆಗುತ್ತದೆ. ಒಟ್ಟು 3,000 ಕೋಟಿ ರೂ. ಆಗಲಿದೆ. ರಾಜ್ಯ ಸರ್ಕಾರ ಅರಮನೆಯ ಭೂಮಿಯನ್ನು ವಶಕ್ಕೆ ಪಡೆಯುವುದಾದರೆ ಟಿಡಿಆರ್ ಕೊಡಲು ಸಾಧ್ಯವಿಲ್ಲ. ಹಾಗಾಗಿ ಸುಗ್ರೀವಾಜ್ಞೆ ಮೂಲಕ ಜಾಗವನ್ನ ವಶಕ್ಕೆ ಪಡೆಯುವ ಮುಕ್ತ ಅವಕಾಶ ಸರ್ಕಾರ ಇಟ್ಟುಕೊಂಡಿದೆ. ಅದಕ್ಕಾಗಿ ಸುಪ್ರೀಂ ಕೋರ್ಟ್ನಲ್ಲಿ ನಾವು ಅಫಿಡವಿಟ್ ಹಾಕಬೇಕಿದೆ ಎಂದು ವಿವರಿಸಿದರು.
1996ರ ನವೆಂಬರ್ 15 ರಂದು ಮೊದಲು ಭೂಮಿ ಸ್ವಾಧೀನಕ್ಕೆ ಕಾನೂನು ಮಾಡಲಾಗಿತ್ತು. ಹೈಕೋರ್ಟ್ ನಲ್ಲಿ ಪ್ರಶ್ನಿಸಿದಾಗಲೂ ಕೋರ್ಟ್ ಈ ಕಾನೂನನ್ನ ಎತ್ತಿ ಹಿಡಿದಿತ್ತು. ಇದನ್ನು ಪ್ರಶ್ನಿಸಿ ರಾಜವಂಶಸ್ಥರು 1997ರಲ್ಲಿ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ಈಗಾಗಲೇ 27 ವರ್ಷಗಳು ಮುಗಿದು ಹೋಗಿವೆ. ರಸ್ತೆ ಅಗಲೀಕರಣ ವಿಚಾರದಲ್ಲೇ ಟಿಡಿಆರ್ ವ್ಯವಸ್ಥೆ ಬಂದ ಮೇಲೆ ಮತ್ತೆ ಈ ವ್ಯಾಜ್ಯ ಮುನ್ನೆಲೆಗೆ ಬಂದಿದೆ.