ಬೆಂಗಳೂರು, ಜ.24(DaijiworldNews/AK): ಮೈಕ್ರೋ ಫೈನಾನ್ಸ್ನವರ ತೀವ್ರ ಕಿರುಕುಳ, ಆನ್ಲೈನ್ ಗೇಮ್ಸ್ ಮೂಲಕ ಸರ್ವನಾಶ ಆಗುತ್ತಿದ್ದರೂ ಸರಕಾರ ಕಾಳಜಿ ವಹಿಸುತ್ತಿಲ್ಲ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆಕ್ಷೇಪಿಸಿದ್ದಾರೆ.

ವಿಧಾನಸೌಧದ ಕೊಠಡಿ ಸಂಖ್ಯೆ 155ರಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸರಕಾರವೂ ಬುರುಡೆ ಬಿಟ್ಟುಕೊಂಡು ಜನರನ್ನು ವಂಚಿಸುತ್ತಿದೆ. ಮೈಕ್ರೋ ಫೈನಾನ್ಸ್ಗಳಿಂದ ಜನರು ಸಾಯುತ್ತಿದ್ದಾರೆ. ಮೈಕ್ರೋ ಫೈನಾನ್ಸ್ನ ಹಣ ಕಟ್ಟಲಾಗದೆ ಇದ್ದುದಕ್ಕಾಗಿ ರಾಮನಗರದ ಹೆಣ್ಮಗಳೊಬ್ಬರು ಕಿಡ್ನಿ ಮಾರಾಟ ಮಾಡಿದ ವಿಚಾರ ಇವತ್ತಿನ ಪತ್ರಿಕೆಯಲ್ಲಿದೆ ಎಂದು ಗಮನ ಸೆಳೆದರು.
ಈ ಸರಕಾರ ನಿದ್ದೆ ಮಾಡುತ್ತಿದೆಯೇ? ಬದುಕಿದೆಯೇ? ಸತ್ತಿದೆಯೇ ಎಂದು ಅವರು ಪ್ರಶ್ನಿಸಿದರು. ಇವರಿಗೆ ಏನಾಗಿದೆ? ಈ ಸರಕಾರಕ್ಕೆ ಅಧಿಕಾರದ ಮದ ಏರಿದೆ. ಇವರ ಅಧಿಕಾರ ಗುದ್ದಾಟದಲ್ಲಿ ರಾಜ್ಯದ ಹಿತವನ್ನೇ ಈ ಸರಕಾರ ಬಲಿ ಕೊಡುತ್ತಿದೆ ಎಂದು ಟೀಕಿಸಿದರು.
ಕೆಲವು ವಿಚಾರಗಳಲ್ಲಿ ಅಗ್ಗದ ಪ್ರಚಾರ ಮಾಡಿಕೊಂಡು ಯಾವುದೇ ಅಭಿವೃದ್ಧಿ ಮಾಡದೆ, ಜನರನ್ನು ಸಂಕಷ್ಟಕ್ಕೆ ದೂಡುವ ಕೆಲಸವನ್ನು ಈ ಸರಕಾರ ಮಾಡುತ್ತಿದೆ. ಕಾನೂನುಗಳಿದ್ದರೂ ಜನರು ಕಷ್ಟ ಪಡುವ, ಪ್ರಾಣತ್ಯಾಗ ಮಾಡುವ ಪರಿಸ್ಥಿತಿ ನಿರ್ಮಾಣ ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿದರು.
ಆನ್ಲೈನ್ ಗೇಮ್ಸ್ ಬಗ್ಗೆ ಸರಕಾರ ಚಕಾರ ಎತ್ತುತ್ತಿಲ್ಲ. ಮೈಕ್ರೋ ಫೈನಾನ್ಸ್ ಇವತ್ತು ಯಾವ ರೀತಿ ಜನರ ಜೀವ ತೆಗೆಯುತ್ತಿದೆಯೋ ಸಮಸ್ಯೆ ಅದಕ್ಕಿಂತ ಹೆಚ್ಚಾಗುತ್ತಿದೆ. ಆನ್ಲೈನ್ ಗೇಮ್ಸ್ನಲ್ಲಿ ರಮ್ಮಿ ಆಟ ಇದೆ. ಆಟ ಆಡಿದರೆ ಸಾವಿರಾರು ರೂಪಾಯಿ ಗಳಿಸಬಹುದೆಂಬ ಆಮಿಷದ ಜಾಹೀರಾತು ತಾನಾಗಿಯೇ ಬರುತ್ತದೆ; ಇಂಥವಕ್ಕೆ ಇವರಲ್ಲಿ ಕಡಿವಾಣವೇ ಇಲ್ಲ ಎಂದು ಟೀಕಿಸಿದರು.
ಮುಡಾ ಹಗರಣದಲ್ಲಿ ಕ್ಲೀನ್ ಚಿಟ್ ಕೊಡ್ತಾರಂತೆ...
ಮುಡಾ ಹಗರಣದಲ್ಲಿ ಮುಖ್ಯಮಂತ್ರಿಗಳ ಒಳಗೊಳ್ಳುವಿಕೆ ಆರೋಪ ಇದೆ. ವೈಟ್ನರ್ ಹಾಕಿದ್ದನ್ನು ಜನ ನೋಡಿದ್ದಾರೆ. ಸಚಿವರು ಕಡತ (ಫೈಲ್) ಹೊತ್ತುಕೊಂಡು ಬಂದದ್ದನ್ನೂ ಜನರು ಕೇಳಿದ್ದಾರೆ. ಮಾನ್ಯ ಮುಖ್ಯಮಂತ್ರಿಗಳು ಪತ್ರ ಬರೆದಿದ್ದರು ಎಂಬುದನ್ನು ಗಮನಿಸಿದ್ದಾರೆ. ಇಷ್ಟೆಲ್ಲ ಆದರೂ ಅವರಿಗೆ ಕ್ಲೀನ್ಚಿಟ್ ಕೊಡುತ್ತಾರಂತೆ. 14 ಸೈಟ್ ನನ್ನದು ಎಂದಿದ್ದರು. ಅವನ್ನು ವಾಪಸ್ ಕೊಟ್ಟಾಗಿದೆ. ಈ ಕಥೆ ಹೇಗಿದೆ ಎಂದರೆ, ಮರ್ಡರ್ ಏನೋ ಆಗಿದೆ. ಬಾಡಿಯೂ ಅಲ್ಲಿದೆ. ಬಾಡಿ ಇರುವುದೂ ಸತ್ಯ; ಮರ್ಡರ್ ಆದುದೂ ಸತ್ಯ. ಯಾರಿಂದ ಮರ್ಡರ್ ಎಂಬುದನ್ನು ಸಾಬೀತು ಮಾಡಲಾಗುತ್ತಿಲ್ಲ; ಆದ್ದರಿಂದಲೇ ಇದೊಂದು ರೀತಿಯ ಅಪರಾಧವಲ್ಲ ಎಂಬಂತೆ ಬಿಂಬಿಸುತ್ತಿದ್ದಾರೆ ಎಂದು ಛಲವಾದಿ ನಾರಾಯಣಸ್ವಾಮಿ ಅವರು ಟೀಕಿಸಿದರು.