ಚಿಕ್ಕೋಡಿ, ಜ.25 (DaijiworldNews/AA): ಶ್ರೀರಾಮುಲು ಪಕ್ಷದ ಸಿದ್ಧಾಂತ ಒಪ್ಪಿ ಕಾಂಗ್ರೆಸ್ ಪಕ್ಷಕ್ಕೆ ಬಂದರೆ ಸ್ವಾಗತಿಸುತ್ತೇನೆ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.

ಬೆಳಗಾವಿಯಲ್ಲಿ ಮಾತನಾಡಿದ ಅವರು, ಶ್ರೀರಾಮುಲು ಪಕ್ಷಕ್ಕೆ ಬರಲು ನನ್ನ ವಿರೋಧವಿಲ್ಲ. ಶ್ರೀರಾಮುಲು ಪಕ್ಷಕ್ಕೆ ಬರುತ್ತಾರೆ ಎನ್ನುವುದು ವದಂತಿ ಅಷ್ಟೇ. ವಿರೋಧದ ಬಗ್ಗೆ ಮಾತನಾಡಿದರೆ ಹೈಕಮಾಂಡ್ ನೋಟಿಸ್ ನೀಡುತ್ತದೆ. ಆಗ ನಾನು ಉತ್ತರ ನೀಡಬೇಕಾಗುತ್ತದೆ ಎಂದು ಹೇಳಿದರು.
ಶ್ರೀರಾಮುಲು ಅವರನ್ನು ಕಾಂಗ್ರೆಸ್ಗೆ ಕರೆತರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಡಿಕೆಶಿ ಶ್ರೀರಾಮುಲು ಅವರನ್ನು ಸಂಪರ್ಕ ಮಾಡಿದ್ದು ನನಗೆ ಗೊತ್ತಿಲ್ಲ. ಇನ್ನೂ ನಾನು ಸಿಎಂ ಆಗುತ್ತೇನೆ ಎಂದು ಹೇಳಿಲ್ಲ. ನಾನು ಸಿಎಂ ಅಭ್ಯರ್ಥಿ ಎಂದು ಹೇಳಿದ್ದೇನೆ. ಸಿಎಂ ಮಾಡುವುದು ಬಿಡುವುದು ಹೈಕಮಾಂಡ್ ಜವಾಬ್ದಾರಿ ಮದರು.
ಸರ್ಕಾರ ಅಧಿಕಾರಕ್ಕೆ ತರಲು ಎಲ್ಲರ ಪಾತ್ರ ಇದೆ. ಅದರಲ್ಲಿ ನಾನು ಭಾಗೀದಾರ. ಡಿಕೆಶಿ ಹಾಗೂ ನನ್ನ ನಡುವೆ ಯಾವುದೇ ಮುನಿಸಿಲ್ಲ. ಎಲ್ಲರೂ ಸೇರಿ ಬೆಳಗಾವಿ ಸಮಾವೇಶ ಯಶಸ್ವಿ ಮಾಡಿದ್ದೇವೆ. ಡಿಕೆಶಿ ನಾನು ಒಗ್ಗಟ್ಟಾಗಿ ಇದ್ದೇವೆ. ರಾಜ್ಯಾಧ್ಯಕ್ಷ ಬದಲಾವಣೆ ವಿಚಾರವನ್ನು ದೆಹಲಿಯಲ್ಲಿ ಕೇಳಬೇಕು. ರಾಜ್ಯಾಧ್ಯಕ್ಷ ಬದಲಾವಣೆ ಮಾಡುವಷ್ಟು ನಮ್ಮ ಬಳಿ ಶಕ್ತಿಯಿಲ್ಲ, ಅಧಿಕಾರ ಇಲ್ಲ. ಚರ್ಚೆ ಅನಾವಶ್ಯಕ ಎಂದು ನುಡಿದರು.