ಬೆಂಗಳೂರು, ಜ.25 (DaijiworldNews/AK): ಮೈಕ್ರೋ ಫೈನಾನ್ಸ್ ದಂಧೆಗೆ ಸರಕಾರದ ಕುಮ್ಮಕ್ಕೂ ಇದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಟೀಕಿಸಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, ಸರಕಾರದ ಕುಮ್ಮಕ್ಕು ಇಲ್ಲದಿದ್ದರೆ ಇದು ಇಲ್ಲಿನವರೆಗೆ ಮುಂದುವರೆಯುತ್ತಿರಲಿಲ್ಲ; ಎರಡೂ ಕಡೆಯಿಂದ ವಸೂಲಿ ಮಾಡಲು ಪೊಲೀಸರಿಗೆ ಇದು ದಂಧೆಯಾಗಿತ್ತು ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಅನೇಕರ ಮಾರಣಹೋಮ ಆದ ಬಳಿಕ ಸರಕಾರವು ಎಚ್ಚತ್ತು ಇವತ್ತು ಒಂದು ಸಭೆ ಕರೆದು ಮೈಕ್ರೋ ಫೈನಾನ್ಸ್ ವಿಚಾರದಲ್ಲಿ ಚರ್ಚೆ ನಡೆಸಿದೆ. ಹೊಸ ಕಾನೂನು ತರುವ ಮತ್ತು ಅವರನ್ನು ಹದ್ದುಬಸ್ತಿನಲ್ಲಿಡುವ ಕೆಲಸ ಮಾಡುವುದಾಗಿ ತಿಳಿಸಿದೆ ಎಂದರು.
ಮೈಕ್ರೋ ಫೈನಾನ್ಸ್ಗಳ ಸಮಸ್ಯೆ ಕುರಿತು ಅನೇಕ ಮುಖಂಡರು ಗಮನ ಸೆಳೆದರೂ ಸರಕಾರ ಯಾವುದೇ ರೀತಿಯ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿತ್ತು. ಕೊನೆಗೂ ಇವತ್ತು ಒಂದು ತೀರ್ಮಾನಕ್ಕೆ ಬಂದಿದೆ. ಫೈನಾನ್ಸ್ ವಸೂಲಿಗೆ ತೊಂದರೆ ಕೊಟ್ಟರೆ, ಗೂಂಡಾಗಳನ್ನು ಕಳುಹಿಸಿದರೆ ಅವರನ್ನು ಬಂಧಿಸುವುದಾಗಿ ಹೇಳಿದ್ದಾರೆ. ಜನರ ಹಿತದೃಷ್ಟಿಯಿಂದ ಇದು ಸ್ವಾಗತಾರ್ಹ; ಕಾಂಗ್ರೆಸ್ ಸರಕಾರದ ಹಿತದೃಷ್ಟಿಯಿಂದ ಅಲ್ಲ ಎಂದು ತಿಳಿಸಿದರು.
ಮಂತ್ರಿಗಳು, ಶಾಸಕರಿಂದ ಆನ್ಲೈನ್ ಗೇಮ್ಸ್ ಕಂಪೆನಿ
ಮೈಕ್ರೋ ಫೈನಾನ್ಸ್ನಲ್ಲಿ ಆಗುವ ಅನಾಹುತಕ್ಕಿಂತ 10ರಷ್ಟು ಅನಾಹುತಗಳು ಆನ್ಲೈನ್ ಗೇಮ್ಸ್ ಮೂಲಕ ಆಗುತ್ತಿದೆ ಎಂದು ಅವರು ತಿಳಿಸಿದರು. ಸರಕಾರದ ಕೆಲವು ಮಂತ್ರಿಗಳು, ಶಾಸಕರು ಆನ್ಲೈನ್ ಗೇಮ್ಸ್ ಕಂಪೆನಿಗಳನ್ನು ಮಾಡಿಕೊಂಡು ಜನರಿಂದ ಸುಲಿಗೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.