ನವದೆಹಲಿ, ಜ.25 (DaijiworldNews/AK): ಗಣರಾಜ್ಯೋತ್ಸವ ಅಂಗವಾಗಿ ಕೇಂದ್ರ ಸರ್ಕಾರ ಇಂದು 2025ನೇ ಸಾಲಿನ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಪ್ಯಾರಾಲಿಂಪಿಕ್ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಪ್ಯಾರಾಲಿಂಪಿಯನ್ ಹರ್ವಿಂದರ್ ಸಿಂಗ್ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದಿದ್ದಾರೆ. ಕರ್ನಾಟಕದ ಜಾನಪಾದ ಗಾಯಕ ವೆಂಕಪ್ಪ ಅಂಬಾಜಿ ಕೂಡ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದಿದ್ದಾರೆ. ವೈದ್ಯಕೀಯ, ಸಾಮಾಜಿಕ ಕಾರ್ಯ, ಸಂಗೀತ ಮತ್ತು ಕೃಷಿ ಕ್ಷೇತ್ರಗಳಲ್ಲಿ ಅಸಾಧಾರಣ ಕೊಡುಗೆಗಳಿಗಾಗಿ ಕ್ರಮವಾಗಿ ಡಾ. ನೀರಜಾ ಭಟ್ಲಾ, ಭೀಮ್ ಸಿಂಗ್ ಭವೇಶ್, ಪಿ. ದಚ್ಚನಮೂರ್ತಿ ಮತ್ತು ಎಲ್ ಹ್ಯಾಂಗ್ಥಿಂಗ್ ಅವರಿಗೆ ಪದ್ಮ ಪ್ರಶಸ್ತಿಗಳನ್ನು ಘೋಷಿಸಲಾಗಿದೆ.
ದೇಶದ ಅತ್ಯುನ್ನತ ನಾಗರಿಕ ಗೌರವಗಳಲ್ಲಿ ಒಂದಾದ ಪದ್ಮ ಪ್ರಶಸ್ತಿಗಳನ್ನು 3 ವಿಭಾಗಗಳಲ್ಲಿ ನೀಡಲಾಗುತ್ತದೆ. ಅವುಗಳೆಂದರೆ ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ.
ಬ್ರೆಜಿಲ್ನ ಹಿಂದೂ ಆಧ್ಯಾತ್ಮಿಕ ನಾಯಕ ಜೋನಾಸ್ ಮಾಸೆಟ್ಟಿ ಮತ್ತು ಭಾರತದ ಪರಂಪರೆಯ ಬಗ್ಗೆ ಬರೆಯುವುದರಲ್ಲಿ ಜನಪ್ರಿಯರಾಗಿರುವ ದಂಪತಿಗಳಾದ ಹಗ್ ಮತ್ತು ಕೊಲೀನ್ ಗ್ಯಾಂಟ್ಜರ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಕರ್ನಾಟಕದ ಬಾಗಲಕೋಟೆ ನಿವಾಸಿಯಾದ ವೆಂಕಪ್ಪ ಅಂಬಾಜಿ ಸುಗಟೇಕರ್ ಅವರು ಜಾನಪದ ಗಾಯಕರು. ಅವರು 1,000ಕ್ಕೂ ಹೆಚ್ಚು ಗೋಂಧಳಿ ಹಾಡುಗಳನ್ನು ಹಾಡಿದ್ದಾರೆ. ಸಾವಿರಾರು ಜನರಿಗೆ ಉಚಿತವಾಗಿ ಹಾಡುಗಾರಿಕೆ ಕಲಿಸುವ ಅವರ ಕ್ರಮಕ್ಕಾಗಿ ಜಾನಪದ ಗಾಯಕನನ್ನು ಪ್ರಧಾನಿ ಮೋದಿ ಈ ಹಿಂದೆ ಮನ್ ಕಿ ಬಾತ್ನಲ್ಲಿ ಶ್ಲಾಘಿಸಿದ್ದರು. ಅವರಿಗೂ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ.
ಗರ್ಭಕಂಠದ ಕ್ಯಾನ್ಸರ್ ಪತ್ತೆ, ತಡೆಗಟ್ಟುವಿಕೆ ಮತ್ತು ನಿರ್ವಹಣೆಯಲ್ಲಿ ವಿಶೇಷ ತಜ್ಞರಾಗಿರುವ ದೆಹಲಿಯ ಸ್ತ್ರೀರೋಗ ತಜ್ಞೆ ಡಾ. ನೀರ್ಜಾ ಭಟ್ಲಾ ಅವರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ.
ಭೋಜ್ಪುರದ ಸಮಾಜ ಸೇವಕ ಭೀಮ್ ಸಿಂಗ್ ಭವೇಶ್ ಅವರಿಗೆ ‘ನಯೀ ಆಶಾ’ ಫೌಂಡೇಶನ್ ಮೂಲಕ ಕಳೆದ 22 ವರ್ಷಗಳಿಂದ ಸಮಾಜದ ಅತ್ಯಂತ ಅಂಚಿನಲ್ಲಿರುವ ಗುಂಪಿನಲ್ಲಿ ಒಂದಾದ ಮುಸಾಹರ್ ಸಮುದಾಯದ ಉನ್ನತಿಗಾಗಿ ಅವಿಶ್ರಾಂತವಾಗಿ ಶ್ರಮಿಸಿದ್ದಕ್ಕಾಗಿ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ.
ಪದ್ಮಶ್ರೀ ಪುರಸ್ಕೃತರಾದ ಪಿ. ದಚ್ಚನಮೂರ್ತಿ ಅವರು ದಕ್ಷಿಣ ಭಾರತೀಯ ಸಂಗೀತ ಮತ್ತು ಸಂಸ್ಕೃತಿಗೆ ಪ್ರಮುಖವಾದ ಶಾಸ್ತ್ರೀಯ ತಾಳವಾದ್ಯವಾದ ಥವಿಲ್ನಲ್ಲಿ ಪರಿಣತಿ ಹೊಂದಿರುವ ವಾದ್ಯಗಾರರಾಗಿದ್ದು, 5 ದಶಕಗಳಿಗೂ ಹೆಚ್ಚು ಅನುಭವ ಹೊಂದಿದ್ದಾರೆ. ಎಲ್ ಹ್ಯಾಂಗ್ಥಿಂಗ್ ಅವರು ನಾಗಾಲ್ಯಾಂಡ್ನ ನೋಕ್ಲಾಕ್ನ ಹಣ್ಣಿನ ರೈತ. ಸ್ಥಳೀಯವಲ್ಲದ ಹಣ್ಣುಗಳನ್ನು ಬೆಳೆಸುವಲ್ಲಿ 30 ವರ್ಷಗಳಿಗೂ ಹೆಚ್ಚು ಪರಿಣತಿ ಹೊಂದಿದ್ದಾರೆ.
ಶನಿವಾರ ಪ್ರಶಸ್ತಿ ಪಡೆದವರಲ್ಲಿ ಗೋವಾದ 100 ವರ್ಷದ ಸ್ವಾತಂತ್ರ್ಯ ಹೋರಾಟಗಾರ್ತಿ ಲಿಬಿಯಾ ಲೋಬೊ ಸರ್ದೇಸಾಯಿ, ಪಶ್ಚಿಮ ಬಂಗಾಳದ ಧಕ್ ಆಟಗಾರ ಗೋಕುಲ್ ಚಂದ್ರ ದಾಸ್, ಕುವೈತ್ನ ಯೋಗ ಸಾಧಕಿ ಶೈಖಾ ಎ ಜೆ ಅಲ್ ಸಬಾ ಮತ್ತು ಉತ್ತರಾಖಂಡದ ಪ್ರಯಾಣ ಬ್ಲಾಗರ್ ದಂಪತಿ ಹಗ್ ಮತ್ತು ಕೊಲೀನ್ ಗ್ಯಾಂಟ್ಜರ್ ಸೇರಿದ್ದಾರೆ.
ಇಲ್ಲಿಯವರೆಗೆ ಬಿಡುಗಡೆಯಾದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರ ಪಟ್ಟಿ ಇಲ್ಲಿದೆ:
ಭೀಮವ್ವ ದೊಡ್ಡಬಾಳಪ್ಪ ಶಿಳ್ಳೆಕ್ಯಾತ (ಕರ್ನಾಟಕ)
ವೆಂಕಪ್ಪ ಅಂಬಾಜಿ ಸುಗಟೇಕರ್ (ಕರ್ನಾಟಕ)
ಎಲ್ ಹ್ಯಾಂಗ್ಥಿಂಗ್ (ನಾಗಾಲ್ಯಾಂಡ್)
ಹರಿಮನ್ ಶರ್ಮಾ (ಹಿಮಾಚಲ ಪ್ರದೇಶ)
ಜುಮ್ಡೆ ಯೊಮ್ಗಮ್ ಗಾಮ್ಲಿನ್ (ಅರುಣಾಚಲ ಪ್ರದೇಶ)
ಜೋಯ್ನಾಚರಣ್ ಬತಾರಿ (ಅಸ್ಸಾಂ)
ನರೇನ್ ಗುರುಂಗ್ (ಸಿಕ್ಕಿಂ)
ವಿಲಾಸ್ ಡಾಂಗ್ರೆ (ಮಹಾರಾಷ್ಟ್ರ)
ಶೈಖಾ ಎ ಜೆ ಅಲ್ ಸಬಾಹ್ (ಕುವೈತ್)
ನಿರ್ಮಲಾ ದೇವಿ (ಬಿಹಾರ)
ಭೀಮ್ ಸಿಂಗ್ ಭಾವೇಶ್ (ಬಿಹಾರ)
ರಾಧಾ ಬಹಿನ್ ಭಟ್ (ಉತ್ತರಾಖಂಡ)
ಸುರೇಶ್ ಸೋನಿ (ಗುಜರಾತ್)
ಪಾಂಡಿ ರಾಮ್ ಮಾಂಡವಿ (ಛತ್ತೀಸ್ಗಢ)
ಜೋನಾಸ್ ಮಾಸೆಟ್ (ಬ್ರೆಜಿಲ್)
ಜಗದೀಶ್ ಜೋಶಿಲಾ (ಮಧ್ಯಪ್ರದೇಶ)
ಹರ್ವಿಂದರ್ ಸಿಂಗ್ (ಹರಿಯಾಣ)
ಭೇರು ಸಿಂಗ್ ಚೌಹಾಣ್ (ಮಧ್ಯಪ್ರದೇಶ)
ಪಿ ದಚ್ಚನಮೂರ್ತಿ (ಪುದುಚೇರಿ)
ಲಿಬಿಯಾ ಲೋಬೋ ಸರ್ದೇಸಾಯಿ (ಗೋವಾ)
ಗೋಕುಲ್ ಚಂದ್ರ ದಾಸ್ (ಪಶ್ಚಿಮ ಬಂಗಾಳ)
ಹಗ್ ಗಂಟ್ಜರ್ (ಉತ್ತರಾಖಂಡ)
ಕೊಲೀನ್ ಗ್ಯಾಂಟ್ಜರ್ (ಉತ್ತರಾಖಂಡ)
ಡಾ. ನೀರ್ಜಾ ಭಟ್ಲಾ (ದೆಹಲಿ)