ಬೆಂಗಳೂರು, ಜ.29(DaijiworldNews/TA): ಡಿ.ಕೆ. ಶಿವಕುಮಾರ್ ಅವರ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ತನಿಖೆಗೆ ಸಂಬಂಧಿಸಿದಂತೆ ಸಿಬಿಐ ಅನುಮತಿಯನ್ನು ಹಿಂಪಡೆದಿದ್ದ ಕಾಂಗ್ರೆಸ್ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ನ ಅರ್ಜಿಯನ್ನು ಸುಪ್ರೀಂಕೋರ್ಟ್ ಇಂದು (ಜನವರಿ 29) ವಿಚಾರಣೆ ಮಾಡಿದೆ.

ಈ ಸಂದರ್ಭದಲ್ಲಿ, ನ್ಯಾಯಾಮೂರ್ತಿ ಯತ್ನಾಳ್ಗೆ ತೀವ್ರ ಟೀಕೆಗಳನ್ನು ಮಾಡಿದ್ದಾರೆ. "ಪೊಲಿಟಿಕಲ್ ಅಡ್ವಾಂಟೆಜ್ ಪಡೆಯಲು ನೀವು ಇಂತಹ ಅರ್ಜಿಗಳನ್ನು ಹಾಕುತ್ತಿದ್ದೀರಿ. ರಾಜಕೀಯ ಕಾರ್ಯಗಳನ್ನು ಫೀಲ್ಡ್ ನಲ್ಲಿ ಮಾಡಿ," ಎಂದು ನ್ಯಾಯಮೂರ್ತಿ ಯತ್ನಾಳ್ಗೆ ತರಾಟೆಗೆ ತೆಗೆದುಕೊಂಡರು. ನಂತರ ಸುಪ್ರೀಂಕೋರ್ಟ್ ಮುಂದಿನ ವಿಚಾರಣೆಯನ್ನು ಮಾರ್ಚ್ 26ಕ್ಕೆ ಮುಂದೂಡುವುದಾಗಿ ಘೋಷಣೆ ಮಾಡಿದೆ.
ಡಿ.ಕೆ. ಶಿವಕುಮಾರ್ ಅವರ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದ ತನಿಖೆಯನ್ನು ಸಿಬಿಐಗೆ ನೀಡಲಾಗಿತ್ತು. ಆದರೆ, ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬರುವ ಮೊದಲು ಈ ಅನುಮತಿಯನ್ನು ಹಿಂಪಡೆಯಲಾಗಿತ್ತು. ಇದನ್ನು ಪ್ರಶ್ನಿಸಿ, ಸಿಬಿಐ ಹಾಗೂ ಯತ್ನಾಳ್ ಹೈಕೋರ್ಟ್ ಮೆಟ್ಟಿಲೇರಿದರು, ಆದರೆ ಹೈಕೋರ್ಟ್ ಅದನ್ನು ವಜಾ ಮಾಡಿತ್ತು. ನಂತರ, ಯತ್ನಾಳ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು.