ಬೆಂಗಳೂರು, ಜ.31 (DaijiworldNews/AA): ಕನಿಷ್ಠ ವೇತನಕ್ಕೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಅನಿರ್ದಿಷ್ಟಾವಧಿ ಹೋರಾಟ ಕೈಗೊಂಡಿದ್ದು, ಸದ್ಯ ಹೋರಾಟ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ.


ಕೊರೆಯುವ ಚಳಿಯಲ್ಲಿಯೂ ಮೂಲಸೌಕರ್ಯಗಳಿಲ್ಲದೆ ಅಂಗನವಾಡಿ ಕಾರ್ಯಕರ್ತೆಯರು ಅಹೋರಾತ್ರಿ ಧರಣಿ ನಡೆಸಿದ್ದಾರೆ. ಆದರೆ ಪೊಲೀಸರ ಮೂಲಕ ಪ್ರತಿಭಟನೆ ಹತ್ತಿಕಲು ಸರ್ಕಾರ ಮುಂದಾಗಿರುವ ಬಗ್ಗೆ ತಿಳಿದುಬಂದಿದೆ. ಇಲ್ಲಿ ಪ್ರತಿಭಟನೆಗೆ ಅವಕಾಶವಿಲ್ಲ, ಫ್ರೀಡಂ ಪಾರ್ಕ್ ಖಾಲಿ ಮಾಡುವಂತೆ ತಾಕೀತು ಮಾಡಿದ ಪೊಲೀಸರು ಪ್ರತಿಭಟನೆ ವೇಳೆ ಅಂಗನವಾಡಿ ಕಾರ್ಯಕರ್ತೆಯರು ಬಳಸಿದ್ದ ಮೈಕ್ ನ ಕನೆಕ್ಷನ್ ಅನ್ನು ಬಂದ್ ಮಾಡಿದ್ದಾರೆ.
ಅಲ್ಲದೆ ಪ್ರತಿಭಟನಾಕಾರರಿದ್ದ ಟೆಂಟ್ ಗಳನ್ನು ಕೆಡವಿ ಹಾಕಿದ್ದಾರೆ ಎನ್ನಲಾಗಿದೆ. ಇನ್ನು ಪ್ರತಿಭಟನೆ ನಿಲ್ಲಿಸದಿದ್ದರೆ ಕೇಸ್ ದಾಖಸಲಾಗುವುದು ಎಂದು ಹೋರಾಟ ನಿರತ ಕಾರ್ಯಕರ್ತರಿಗೆ ಬೆದರಿಕೆ ಹಾಕಲಾಗಿದೆ.
ವೇತನ ಹೆಚ್ಚಳ ಮಾಡದಿದ್ದರೆ ನಾವು ಪ್ರತಿಭಟನೆಯನ್ನು ಕೈಬಿಡುವುದಿಲ್ಲ. ಕೂಡಲೇ ರಾಜ್ಯ ಸರ್ಕಾರ ವೇತನ ಹೆಚ್ಚಳ ಮಾಡಿ ಆದೇಶ ಹೊರಡಿಸಬೇಕು ಎಂದು ದ.ಕ, ಉಡುಪಿ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಆಗಮಿಸಿರುವ ಅಂಗನವಾಡಿ ಕಾರ್ಯಕರ್ತೆಯರು ಒತ್ತಾಯಿಸಿದ್ದಾರೆ.