ನವದೆಹಲಿ,ಜ.31 (DaijiworldNews/AK): ದೇಶದ ಪ್ರಥಮ ಪ್ರಜೆ, ಸಂವಿಧಾನದ ಅತ್ಯುನ್ನತ ಸ್ಥಾನದಲ್ಲಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ಸಂಸತ್ತಿನ ಜಂಟಿ ಸದನ ಉದ್ದೇಶಿಸಿ ಮಾಡಿದ ಭಾಷಣವನ್ನು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ʼಪುವರ್ ಥಿಂಗ್ʼ ಎಂದು ಸಂಬೋಧಿಸಿ ಕೀಳು ಮಟ್ಟದ ಹೇಳಿಕೆ ನೀಡಿ ಸಂವಿಧಾನಕ್ಕೆ ಕಳಂಕವುಂಟು ಮಾಡಿರುವುದನ್ನು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ತೀವ್ರವಾಗಿ ಖಂಡಿಸಿದ್ದಾರೆ.

ಸೋನಿಯಾ ಗಾಂಧಿಯು ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣವನ್ನು ʼಪುವರ್ ಥಿಂಗ್ʼ ಎನ್ನುತ್ತ ಗೌರವಯುತ ಸಂವಿಧಾನಿಕ ಹುದ್ದೆಯನ್ನು ಟೀಕಿಸಿರುವುದರ ಬಗ್ಗೆ ಪ್ರತಿಕ್ರಿಯಿಸಿರುವ ಕ್ಯಾ. ಚೌಟ ಅವರು, ಕಾಂಗ್ರೆಸ್ ಪಕ್ಷದವರು ಹಾಗೂ ಅದರ ನೇತೃತ್ವ ವಹಿಸಿರುವ ನಾಯಕರು ದೇಶದ ಸಂವಿಧಾನ ವ್ಯವಸ್ಥೆಯನ್ನು ಸಾರ್ವಜನಿಕವಾಗಿ ಅವಮಾನಿಸುವುದು, ಘನತೆವೆತ್ತ ರಾಷ್ಟ್ರಾಧ್ಯಕ್ಷರನ್ನು ಅವಹೇಳನ ಮಾಡುವುದು ಹೊಸದೇನೆಲ್ಲ. ಇದು ಕಾಂಗ್ರೆಸ್ನವರ ಸಂಸ್ಕೃತಿಯಾಗಿ ಬಿಟ್ಟಿದೆ ಎಂದು ಆರೋಪಿಸಿದ್ದಾರೆ.
ಸ್ವಜನ ಪಕ್ಷಪಾತ ಹಾಗೂ ಕುಟುಂಬ ರಾಜಕಾರಣವೇ ಮುಖ್ಯವಾಗಿರುವ ನೆಹರು ಕುಟುಂಬ ಈ ಹಿಂದೆ ಸಂವಿಧಾನಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾಮ್ ಅವರನ್ನು ಅಪಮಾನ ಮಾಡಿತ್ತು. ಅತ್ಯಂತ ಪವಿತ್ರವಾದ ಸಂವಿಧಾನಕ್ಕೆ ಅಗೌರವದ ವರ್ತನೆ ತೋರಿಸುವುದು, ದೇಶದ ಸಂವಿಧಾನಿಕ ಹುದ್ದೆಯಲ್ಲಿರುವ ರಾಷ್ಟ್ರಪತಿಗಳ ಬಗ್ಗೆಯೇ ಕೀಳಾಗಿ ಮಾತನಾಡುವುದು ನೆಹರು ಗಾಂಧಿ ಕುಟುಂಬ ಮುನ್ನಡೆಸುತ್ತಿರುವ ಕಾಂಗ್ರೆಸ್ ಪಕ್ಷದವರಿಗೆ ಒಂದು ಛಾಳಿಯಾಗಿಬಿಟ್ಟಿದೆ. ಇದು ದೇಶದ ಸಂವಿಧಾನ ವ್ಯವಸ್ಥೆ ಹಾಗೂ ಬುಡಕಟ್ಟು-ಶೋಷಿತ ಸಮಾಜದ ಮಹಿಳೆಯರ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಅದರಲ್ಲಿಯೂ ಪಕ್ಷದ ಅತ್ಯಂತ ಹಿರಿಯ ನಾಯಕಿ ಸೋನಿಯಾ ಗಾಂಧಿಗೆ ಎಷ್ಟೊಂದು ಗೌರವ, ಕಾಳಜಿ ಇದೆ ಎನ್ನುವುದಕ್ಕೆ ಇಂದಿನ ಅವರ ಹೇಳಿಕೆ ಸಾಕ್ಷಿ ಎಂದು ಕ್ಯಾ. ಚೌಟ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬುಡಕಟ್ಟು ಸಮಾಜದಿಂದ ಬಂದು, ಅದರಲ್ಲಿಯೂ ಮಹಿಳೆಯಾಗಿ ದೇಶದ ಅತ್ಯುನ್ನತ ಸ್ಥಾನಕ್ಕೆ ಏರಿರುವ ದ್ರೌಪದಿ ಮುರ್ಮು ಅವರ ಸಾಧನೆಯನ್ನು ನಾವೆಲ್ಲ ಪ್ರಶಂಸಿಸಬೇಕು.
ಸಂವಿಧಾನಿಕ ಪೀಠದ ಮೇರು ಸ್ಥಾನ ಅಲಂಕರಿಸಿರುವ ಅವರ ಬದುಕಿನ ಹಾದಿ ನಮಗೆಲ್ಲ ಒಂದು ಸ್ಫೂರ್ತಿ. ಹೀಗಿರುವಾಗ, ಸ್ವಂತ ಪರಿಶ್ರಮದಿಂದ ಬಂದು ಗೌರವಾನ್ವಿತ ಸ್ಥಾನದಲ್ಲಿ ಕುಳಿತು ಮಾಡಿದ ದ್ರೌಪದಿ ಮುರ್ಮು ಅವರ ಭಾಷಣವನ್ನು ಒಬ್ಬ ಮಹಿಳೆಯಾಗಿ ಸೋನಿಯಾ ಗಾಂಧಿ ಇಷ್ಟೊಂದು ತುಚ್ಯವಾಗಿ ಟೀಕಿಸುವ ಜತೆಗೆ ರಾಷ್ಟ್ರಪತಿಗಳಿಗೆ ಬಹಳ ಸುಸ್ತಾಗಿತ್ತು ಎಂದು ಹೇಳಿರುವುದು ಕಾಂಗ್ರೆಸ್ ಪಕ್ಷ ಹಾಗೂ ಕಾಂಗ್ರೆಸ್ ನಾಯಕತ್ವದ ಮಾನಸಿಕತೆಯನ್ನು ತೋರಿಸುತ್ತದೆ ಎಂದು ಕ್ಯಾ. ಚೌಟ ತಿರುಗೇಟು ನೀಡಿದ್ದಾರೆ.ಸೋನಿಯಾ ಗಾಂಧಿ 2025ರ ಅಧಿವೇಶನದ ಮೊದಲ ದಿನವೇ ಪುವರ್ ಥಿಂಗ್ ಎಂದು ಟೀಕಿಸಿದರೆ, ರಾಹುಲ್ ಗಾಂಧಿ ರಾಷ್ಟ್ರಪತಿ ಭಾಷಣವನ್ನು ಬೋರಿಂಗ್ ಎಂದಿದ್ದಾರೆ.