ನವದೆಹಲಿ, ಫೆ.01 (DaijiworldNews/AK): ವೈದ್ಯಕೀಯ ಕಾಲೇಜುಗಳು ಮತ್ತು ಆಸ್ಪತ್ರೆಗಳಲ್ಲಿ 10,000 ಹೆಚ್ಚುವರಿ ಸೀಟುಗಳನ್ನು ಸೇರಿಸಲಾಗುವುದು. ಮುಂದಿನ 5 ವರ್ಷಗಳಲ್ಲಿ 75,000 ಸೀಟುಗಳನ್ನು ಸೇರಿಸಲಾಗುವುದು ಎಂದು ಬಜೆಟ್ನಲ್ಲಿ ನಿರ್ಮಲಾ ಸೀತರಾಮ್ ಘೋಷಿಸಿದರು.

2024ರ ನಂತರ ಪ್ರಾರಂಭವಾದ 5 ಐಐಟಿಗಳಲ್ಲಿ ಕೇಂದ್ರ ಸರ್ಕಾರ ಹೆಚ್ಚುವರಿ ಮೂಲಸೌಕರ್ಯಗಳನ್ನು ರಚಿಸಲಿದೆ ಎಂದು ಅವರು ಘೋಷಿಸಿದರು.ವೈದ್ಯಕೀಯ ಶಿಕ್ಷಣದ ಸಾಮರ್ಥ್ಯವನ್ನು ವಿಸ್ತರಿಸುವ ಬಗ್ಗೆ ಹೇಳುವುದಾದರೆ, ಸರ್ಕಾರವು 10 ವರ್ಷಗಳಲ್ಲಿ ಸುಮಾರು 1.1 ಲಕ್ಷ ಪದವಿಪೂರ್ವ ಮತ್ತು ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಸೀಟುಗಳನ್ನು ಸೇರಿಸಿದೆ. ಇದು ಶೇ. 130ರಷ್ಟು ಹೆಚ್ಚಳವಾಗಿದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಅದೇ ರೀತಿ, 23 ಐಐಟಿಗಳು ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಏರಿಕೆ ದಾಖಲಿಸಿವೆ. 2014ರಲ್ಲಿ 65,000ರಿಂದ 1.35 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಇದು ಶೇಕಡಾ 100 ರಷ್ಟು ಜಿಗಿತವಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಮುಂದಿನ 5 ವರ್ಷಗಳಲ್ಲಿ ಐಐಟಿ ಮತ್ತು ಐಐಎಸ್ಸಿಯಲ್ಲಿ ತಂತ್ರಜ್ಞಾನ ಸಂಶೋಧನೆಗಾಗಿ 10,000 ಫೆಲೋಶಿಪ್ಗಳನ್ನು ನೀಡಲಾಗುವುದು. ಐಐಟಿ ಪಾಟ್ನಾದಲ್ಲಿ ಕ್ಯಾಂಪಸ್ ಮತ್ತು ಹಾಸ್ಟೆಲ್ ವಿಸ್ತರಣೆಯನ್ನು ಸಹ ಮಾಡಲಾಗುವುದು. ನಿರ್ಮಲಾ ಸೀತಾರಾಮನ್ ಐಐಟಿ ಮತ್ತು ಐಐಎಸ್ಸಿಗಾಗಿ ಪ್ರಧಾನ ಮಂತ್ರಿ ಸಂಶೋಧನಾ ಫೆಲೋಶಿಪ್ ಯೋಜನೆಯನ್ನು ಸಹ ಘೋಷಿಸಿದ್ದಾರೆ.