ಬೆಂಗಳೂರು, ಫೆ.01 (DaijiworldNews/AK):ಯುಪಿಎ ಅವಧಿಯಲ್ಲಿ ಅನಗತ್ಯ ವೆಚ್ಚ ಹಾಗೂ ಲೂಟಿಯಿಂದಾಗಿ ಅಧಿಕ ಗಾತ್ರದ ಬಜೆಟ್ ಮಂಡಿಸಲು ಸಾಧ್ಯವಾಗುತ್ತಿರಲಿಲ್ಲ. ಅವುಗಳಿಗೆ ಕಡಿವಾಣ ಹಾಕಿದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ, ಅತ್ಯಧಿಕ ಗಾತ್ರದ ಬಜೆಟ್ ಮಂಡಿಸಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು.

ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2013-14 ರ ಮನಮೋಹನ್ ಸಿಂಗ್ ಸರ್ಕಾರದಲ್ಲಿ ಬಜೆಟ್ ಗಾತ್ರ 16,65,297 ಕೋಟಿ ರೂ. ಆಗಿತ್ತು. 2025-26 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ 50,65,345 ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಿದೆ.
ಲೂಟಿಯಾಗುತ್ತಿದ್ದ ಹಣವನ್ನು ಮರಳಿ ತಂದಿದ್ದರಿಂದ ಬಜೆಟ್ ಗಾತ್ರ ಹೆಚ್ಚಾಗಿದೆ. ಹಿಂದೆ 11,09,997 ಕೋಟಿ ರೂ. ಯೋಜನೇತರ ವೆಚ್ಚವಾಗಿದ್ದರೆ, ಈಗ ಅದು 39,44,255 ಕೋಟಿ ರೂ. ಗೆ ಏರಿದೆ. ಬಂಡವಾಳ ವೆಚ್ಚ ಆಗ 2,29,129 ಕೋಟಿ ರೂ. (13.7%) ಆಗಿದ್ದು, ಈಗ 11,21,090 ಕೋಟಿ ರೂ. ಆಗಿದೆ. ಅಂದರೆ ಬಂಡವಾಳ ವೆಚ್ಚ 9 ಲಕ್ಷ ಕೋಟಿ ರೂ. (22.13%) ಏರಿಕೆ ಕಂಡಿದೆ. ಅಂದರೆ ತೆರಿಗೆ ಸೋರಿಕೆ, ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕಲಾಗಿದೆ ಎಂದರು.
ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿರುವ ರೈತರಿಗೆ ಸಿಗುವ ಸಾಲದ ಮಿತಿಯನ್ನು 3 ಲಕ್ಷ ರೂ.ನಿಂದ 5 ಲಕ್ಷ ರೂ. ಗೆ ಏರಿಸಲಾಗಿದೆ. ಸ್ಟಾರ್ಟ್ಅಪ್ ಕಂಪನಿಗಳಿಗೆ 10 ಕೋಟಿ ರೂ.ನಿಂದ 20 ಕೋಟಿ ರೂ. ವರೆಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತದೆ. ಮೊದಲ ಬಾರಿ ಉದ್ಯಮ ಆರಂಭಿಸುವ ಎಸ್ಸಿ, ಎಸ್ಟಿ ವರ್ಗದ 5 ಲಕ್ಷ ಮಹಿಳೆಯರಿಗೆ ಹೊಸ ಯೋಜನೆಯಡಿ ಟರ್ಮ್ಲೋನ್ ನೀಡಲಾಗುತ್ತದೆ ಎಂದರು.
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಬಾಣಂತಿಯರ ಸಾವಾಗುತ್ತಿದೆ. ಕೇಂದ್ರ ಸರ್ಕಾರದಿಂದ 1 ಕೋಟಿ ತಾಯಂದಿರಿಗೆ ಪೌಷ್ಟಿಕ ಆಹಾರ ನೀಡುವ ಯೋಜನೆ ತರಲಾಗಿದೆ. ಇದು ಬಾಣಂತಿಯರ ಆರೋಗ್ಯ ರಕ್ಷಣೆಗೆ ಸಹಾಯವಾಗಲಿದೆ ಎಂದು ತಿಳಿಸಿದರು.
ಮಧ್ಯಮ ವರ್ಗಕ್ಕೆ 12 ಲಕ್ಷ ರೂ. ವರೆಗೆ ತೆರಿಗೆ ವಿನಾಯಿತಿ ನೀಡಿರುವುದರಿಂದ ಜನರಿಗೆ ಅನುಕೂಲವಾಗಿದೆ. ಸಿಎಂ ಸಿದ್ದರಾಮಯ್ಯ ಗಾಳಿ ಒಂದನ್ನು ಬಿಟ್ಟು ಎಲ್ಲಕ್ಕೂ ತೆರಿಗೆ ವಿಧಿಸಿದ್ದಾರೆ. ಮೋದಿ ಸರ್ಕಾರ ಯಾವುದೇ ತೆರಿಗೆಯನ್ನು ಹೇರಿಲ್ಲ ಎಂದರು.