ಬೆಂಗಳೂರು, ಫೆ.02 (DaijiworldNews/AA): ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಯಾವಾಗ ಭವಿಷ್ಯ ಹೇಳೋದನ್ನ ಕಲಿತರೋ ಗೊತ್ತಿಲ್ಲ ಎಂದು ಸಿಎಂ ಬದಲಾವಣೆ ಹೇಳಿಕೆಗೆ ಸಂಬಂಧಿಸಿದಂತೆ ಗೃಹ ಸಚಿವ ಜಿ.ಪರಮೇಶ್ವರ್ ವಾಗ್ದಾಳಿ ನಡೆಸಿದ್ದಾರೆ.

ನವೆಂಬರ್ನಲ್ಲಿ ಸಿದ್ದರಾಮಯ್ಯ ಸಿಎಂ ಅವಧಿ ಮುಕ್ತಾಯ ಎಂಬ ಆರ್.ಅಶೋಕ್ ಹೇಳಿಕೆ ಸಂಬಂಧ ಪ್ರತಿಕ್ರಿಯೆ ನೀಡಿ, ಅವರು ಯಾವಾಗ ಭವಿಷ್ಯ ಹೇಳೋದನ್ನು ಕಲಿತರು ಎಂದು ನಮಗೆ ಗೊತ್ತಿಲ್ಲ. ಅಂಥ ಯಾವುದೇ ಬೆಳವಣಿಗೆ ನಡೆದಿಲ್ಲ. ನಾವೆಲ್ಲ 5 ವರ್ಷ ಸಿದ್ದರಾಮಯ್ಯ ಅವರೇ ಸಿಎಂ ಆಗಿರ್ತಾರೆ ಅಂತ ಅಂದುಕೊಂಡಿದ್ದೇವೆ. ಸಿಎಲ್ಪಿ ಸಭೆಯಲ್ಲಿ ಸಿಎಂ ಆಯ್ಕೆ ಆಯ್ತು. ಆ ಸಂದರ್ಭದಲ್ಲಿ ಅವರು ಎರಡೂವರೆ ವರ್ಷ ಮಾತ್ರ ಇರುತ್ತಾರೆ ಎಂದು ನಮಗೇನೂ ಹೈಕಮಾಂಡ್ ಹೇಳಿಲ್ಲ. ಹಾಗಾಗಿ ನಾವೆಲ್ಲ ಸಿದ್ದರಾಮಯ್ಯ ಅವರೇ ಐದು ವರ್ಷ ಸಿಎಂ ಆಗಿರುತ್ತಾರೆ ಎಂದು ಅಂದುಕೊಂಡಿದ್ದೇವೆ. ಈ ಮಧ್ಯೆ ಹೈಕಮಾಂಡ್ ಏನು ತೀರ್ಮಾನ ಮಾಡುತ್ತೋ ಗೊತ್ತಿಲ್ಲ ಎಂದರು.
ಬಿ.ಆರ್.ಪಾಟೀಲ್ ರಾಜೀನಾಮೆ ವಿಚಾರವಾಗಿ ಮಾತನಾಡಿ, ಅವರು ಯಾಕೆ ರಾಜೀನಾಮೆ ಕೊಟ್ರು ಅಂತ ಗೊತ್ತಿಲ್ಲ. ಯಾಕೆ ರಾಜೀನಾಮೆ ಕೊಟ್ರು ಅಂತ ಸಿಎಂಗೆ ಹೇಳಿರುತ್ತಾರೆ. ಅವರಿಗೆ ಏನು ಅಸಮಾಧಾನ ಅಂತ ಗೊತ್ತಿಲ್ಲ. ರಾಜೀನಾಮೆ ಕೊಟ್ಟ ಬಗ್ಗೆಯೂ ಗೊತ್ತಿಲ್ಲ ಎಂದು ತಿಳಿಸಿದರು.