ನವದೆಹಲಿ,ಫೆ.03(DaijiworldNews/ AK) : ಪ್ರಯಾಗರಾಜ್ನಲ್ಲಿ ನಡೆಯುತ್ತಿರುವ ಮಹಾ ಕುಂಭದಲ್ಲಿ ಇತ್ತೀಚೆಗೆ ನಡೆದ ಕಾಲ್ತುಳಿತದ ಹಿನ್ನೆಲೆಯಲ್ಲಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ವಿಚಾರಣೆಗೆ ಸುಪ್ರೀಂ ಕೋರ್ಟ್ ಇಂದು ನಿರಾಕರಿಸಿದೆ.

ಅರ್ಜಿದಾರರು ಅಲಹಾಬಾದ್ ಹೈಕೋರ್ಟ್ ಅನ್ನು ಸಂಪರ್ಕಿಸುವಂತೆ ನಿರ್ದೇಶಿಸಿದೆ. ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರನ್ನೊಳಗೊಂಡ ಪೀಠವು ಮಹಾಕುಂಭದ ಕಾಲ್ತುಳಿತದ ಪಿಐಎಲ್ ವಿಚಾರಣೆಗೆ ನಿರಾಕರಿಸಿದ್ದರೂ ಇದೊಂದು ದುರದೃಷ್ಟಕರ ಘಟನೆ ಎಂದು ಹೇಳಿದೆ.
ಸುಪ್ರೀಂ ಕೋರ್ಟ್ ಅರ್ಜಿದಾರರ ವಕೀಲ ವಿಶಾಲ್ ತಿವಾರಿ ಅವರನ್ನು ಅಲಹಾಬಾದ್ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸುವಂತೆ ಕೇಳಿತು. “ಇದು ದುರದೃಷ್ಟಕರ ಘಟನೆ. ಆದರೆ, ನೀವು ಅಲಹಾಬಾದ್ ಹೈಕೋರ್ಟ್ಗೆ ಹೋಗುವಂತೆ ಪೀಠವು ತಿವಾರಿ ಅವರಿಗೆ ಸೂಚಿಸಿತು.
ಉತ್ತರ ಪ್ರದೇಶ ಸರ್ಕಾರವನ್ನು ಪ್ರತಿನಿಧಿಸುವ ವಕೀಲರು ಈ ವಿಷಯದ ಬಗ್ಗೆ ನ್ಯಾಯಾಂಗ ಆಯೋಗವನ್ನು ಈಗಾಗಲೇ ಸ್ಥಾಪಿಸಲಾಗಿದೆ ಎಂದು ನ್ಯಾಯಪೀಠದ ಮುಂದೆ ಸಲ್ಲಿಸಿದರು. ಈ ನಿಟ್ಟಿನಲ್ಲಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಾಗಿದೆ ಎಂದು ಅವರು ಹೇಳಿದರು. ಅರ್ಜಿ ಸಲ್ಲಿಕೆಗಳನ್ನು ಆಲಿಸಿದ ನಂತರ, ನ್ಯಾಯಪೀಠವು ಅರ್ಜಿದಾರರಿಗೆ ಹೈಕೋರ್ಟ್ಗೆ ತೆರಳಲು ಸೂಚಿಸಿ, ಪಿಐಎಲ್ ಅನ್ನು ವಜಾಗೊಳಿಸಿತು.
ಜನವರಿ 29ರ ಮುಂಜಾನೆ ಲಕ್ಷಾಂತರ ಯಾತ್ರಿಕರು ಮೌನಿ ಅಮವಾಸ್ಯೆಯ ಶುಭ ಸಂದರ್ಭದಲ್ಲಿ ಪವಿತ್ರ ಸ್ನಾನ ಮಾಡಲು ಧಾವಿಸಿದಾಗ ಮಹಾಕುಂಭದ ತ್ರಿವೇಣಿ ಸಂಗಮ ಪ್ರದೇಶದಲ್ಲಿ ಕಾಲ್ತುಳಿತ ಉಂಟಾಗಿತ್ತು. ಇದರಲ್ಲಿ 30 ಜನರು ಪ್ರಾಣ ಕಳೆದುಕೊಂಡರು ಮತ್ತು 60 ಜನರು ಗಾಯಗೊಂಡಿದ್ದರು. ಈ ಘಟನೆ ಬೆಳಗಿನ ಜಾವ 1-2 ಗಂಟೆಯ ನಡುವೆ ಸಂಭವಿಸಿತ್ತು. ಜನವರಿ 13ರಂದು ಪ್ರಯಾಗ್ರಾಜ್ನಲ್ಲಿ ಪ್ರಾರಂಭವಾದ ಮಹಾಕುಂಭ ಮೇಳ ಫೆಬ್ರವರಿ 26ರವರೆಗೆ ನಡೆಯಲಿದೆ.