ಬೆಂಗಳೂರು, ಫೆ.03 (DaijiworldNews/AA): ನಮ್ಮ ರಾಜ್ಯದ ಹಣಕಾಸು ಬಗ್ಗೆ ಮಾತಾಡುವ ಮೊದಲು ನಿರ್ಮಲಾ ಸೀತಾರಾಮನ್ ರಾಜ್ಯಕ್ಕೆ ಏನು ಕೊಟ್ಟಿದ್ದಾರೆ ಹೇಳಲಿ? ಕರ್ನಾಟಕದಿಂದ ರಾಜ್ಯಸಭೆಗೆ ಹೋಗಿದ್ದಾರೆ. ಕರ್ನಾಟಕದಿಂದ ಹೋಗಿ ಕರ್ನಾಟಕದ ಹಿತ ಕಾಪಾಡಲು ಅವರು ವಿಫಲರಾಗಿದ್ದಾರೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಕಿಡಿಕಾರಿದ್ದಾರೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಕರ್ನಾಟಕ ಸರ್ಕಾರದ ಬಳಿ ಹಣವಿಲ್ಲ ಎಂಬ ನಿರ್ಮಲಾ ಸೀತಾರಾಮನ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ನಿರ್ಮಲಾ ಸೀತಾರಾಮನ್ ಈ ದೇಶದ ಹಣಕಾಸು ಸಚಿವೆ. ಅವರ ಬಗ್ಗೆ ನಮಗೆ ಗೌರವ ಇದೆ. ಕರ್ನಾಟಕಕ್ಕೆ ನಿರ್ಮಲಾ ಸೀತಾರಾಮನ್ ಕೊಡುಗೆ ಏನು ಎಂದು ಮೊದಲು ಹೇಳಲಿ. ಬಳಿಕ ಕರ್ನಾಟಕದ ಆರ್ಥಿಕ ಸ್ಥಿತಿ ಬಗ್ಗೆ ಮಾತನಾಡಲಿ. ಕರ್ನಾಟಕಕ್ಕೆ ಅವರು ಯಾವ ಯೋಜನೆ ಕೊಟ್ಟಿದ್ದಾರೆ? ಅವರು ಹೇಳಿದ ಮೇಲೆ ಅವರನ್ನು ಹೊಗಳೋಣ. ಅದು ಬಿಟ್ಟು ರಾಜ್ಯದ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಭದ್ರ ಯೋಜನೆಗೆ 5 ಸಾವಿರ ರೂ., ರಾಷ್ಟ್ರೀಯ ಯೋಜನೆ ಮಾಡ್ತೀವಿ ಎಂದು ಹೇಳಿ ಮಾಡಿದರಾ? ನಾವು ಬಡವರ ಹಿತದೃಷ್ಟಿಯಿಂದ ಗ್ಯಾರಂಟಿ ಯೋಜನೆ ಮಾಡಿದ್ದೇವೆ. ರಾಜಕೀಯಕ್ಕೆ ಮಾಡಿದ್ದಾರೆ ಎಂದು ಹೇಳಿದರೂ ಕೂಡ ತಪ್ಪೇನಿಲ್ಲ. ನಾವು ಕೊಟ್ಟ ಗ್ಯಾರಂಟಿಯಿಂದ ತಾಯಿ ಮಗಳಿಗೆ ಕಂಪ್ಯೂಟರ್ ಕೊಡಿಸಿದ್ದಾರೆ. ಇಂತಹ ಅನೇಕ ಉದಾಹರಣೆ ಕೊಡಬಹುದು. ಕರ್ನಾಟಕದ ಬಳಿ ಹಣ ಇಲ್ಲ, ದಿವಾಳಿ ಆಗಿದೆ ಅನ್ನೋದು ಸರಿಯಲ್ಲ. ಹೀಗೆ ಅವರು ಮಾತನಾಡಿದರೆ ಮೊದಲು ನೀವು ಏನ್ ಮಾಡಿದ್ದೀರಾ ಕೇಳಬೇಕಾಗುತ್ತೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಜೆಟ್ನಲ್ಲಿ ಕರ್ನಾಟಕಕ್ಕೆ ತಮಿಳುನಾಡಿಗಿಂತ ಕಡಿಮೆ ಹಣ ಕೊಟ್ಟಿರೋದಕ್ಕೆ ನಮಗೆ ನಾಚಿಕೆ ಆಗುತ್ತದೆ. ಅವರು ಏನ್ ಕೊಟ್ಟಿದ್ದಾರೆ ಅಂತ ಹೇಳಲಿ. ನಾವು ಪಕ್ಷ ಯಾವುದು ಎಂದು ನೋಡದೇ ಹೊಗಳುತ್ತೇವೆ. ಯಾವುದಾದರೂ ಯೋಜನೆ ಕೊಡಬೇಕು ಅಲ್ಲವಾ? ಬೆಂಗಳೂರು, ನೀರಾವರಿ ಯೋಜನೆಗೆ ಹಣ ಕೊಟ್ಟಿದ್ದೇವೆ ಅಂತ ಹೇಳಲಿ ನೋಡೋಣ ಎಂದು ಗುಡುಗಿದರು.