ಬೆಂಗಳೂರು, ಫೆ.03 (DaijiworldNews/AA): ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ ಮಂಡಿಸಿರುವ 2025-26ನೇ ಸಾಲಿನ ಆಯವ್ಯಯ, ವಿಕಸಿತ ಭಾರತ ನಿರ್ಮಾಣಕ್ಕೆ ಪೂರಕವಾಗಿದ್ದು, ಸರ್ವವ್ಯಾಪ್ತಿ - ಸರ್ವ ಸ್ಪರ್ಶಿಯಾಗಿದೆ. ಮಧ್ಯಮ ವರ್ಗದವರೂ ಸೇರಿದಂತೆ ಎಲ್ಲ ಜನರ ಆಶೋತ್ತರಗಳಿಗೆ ಸ್ಪಂದಿಸುವ ರೀತಿಯಲ್ಲಿದೆ ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.

ಬೆಂಗಳೂರಿನಲ್ಲಿಂದು ಕೇಂದ್ರ ಬಜೆಟ್ ಕುರಿತು ರಾಜ್ಯ ಕಾಂಗ್ರೆಸ್ ನಾಯಕರು ಮಾಡಿರುವ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ. ವಿರೋಧ ಪಕ್ಷವಾಗಿ ಟೀಕೆ ಮಾಡಬೇಕು ಎಂಬ ಕಾರಣಕ್ಕಾಗಿ ಟೀಕೆ ಮಾಡಲಾಗುತ್ತಿದೆ. ರೈತರು, ಬಡವರು, ಮಹಿಳೆಯರು, ಹಿರಿಯ ನಾಗರಿಕರ ಸರ್ವಾಂಗೀಣ ಅಭಿವೃದ್ಧಿಗೆ ಹತ್ತು ಹಲವು ಯೋಜನೆಗಳನ್ನು ಪ್ರಕಟಿಸಲಾಗಿದೆ ಎಂದರು.
ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಬಜೆಟ್ ಅತ್ಯುತ್ತಮ ಹಾಗೂ ಮುಂದಾಲೋಚನೆ ಇರತಕ್ಕ ಅಭಿವೃದ್ಧಿ ಪರವಾದ ಬಜೆಟ್ ಆಗಿದೆ ಎಂದು ಇಡೀ ದೇಶವೇ ಮುಕ್ತ ಕಂಠದಿಂದ ಪ್ರಶಂಸಿಸುತ್ತಿದೆ. ಇದು ಕಾಂಗ್ರೆಸ್ ನವರಿಗೆ ಅರ್ಥವಾಗುತ್ತಿಲ್ಲ. ಕರ್ನಾಟಕಕ್ಕೆ ಕಳೆದ ವರ್ಷ ನೀಡಿರುವ ಅನುದಾನಕ್ಕೆ ಹೆಚ್ಚಿನ ಅನುದಾನವನ್ನು ಬಜೆಟ್ ನಲ್ಲಿ ಘೋಷಿಸಲಾಗಿದೆ ಎಂದು ಅವರು ಅಂಕಿ-ಅಂಶಗಳ ಸಹಿತ ವಿವರಿಸಿದರು.