ಬೆಂಗಳೂರು, ಫೆ.05 (DaijiworldNews/AA): ನಾನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅರ್ಜಿ ಹಾಕಿಲ್ಲ. ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಯೂ ಅಲ್ಲ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಸ್ಪಷ್ಟಪಡಿಸಿದ್ದಾರೆ.

ಅಧ್ಯಕ್ಷರ ಬದಲಾವಣೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನನು ವರಿಷ್ಠರು ಪ್ರತಿಪಕ್ಷದ ನಾಯಕನನ್ನಾಗಿ ಮಾಡಿದ್ದಾರೆ. ಅದನ್ನು ಗೌರವದಿಂದ ನಡೆಸಿಕೊಂಡು ಹೋಗುತ್ತಿದ್ದೇನೆ. ಕೇಂದ್ರದ ನಾಯಕರು ಎಲ್ಲವನ್ನು ಅವಲೋಕನ ಮಾಡುತ್ತಿದ್ದಾರೆ. ಕೋರ್ ಕಮಿಟಿ ಸದಸ್ಯರಿಗೆ, ಕಾರ್ಯಕರ್ತರಿಗೆ ಪಕ್ಷದಲ್ಲಿನ ಕಚ್ಚಾಟ ಬೇಸರ ಮತ್ತು ನೋವು ತರಿಸಿದೆ. ಇವೆಲ್ಲವನ್ನು ಹೈಕಮಾಂಡ್ ಸರಿ ಮಾಡಲಿದೆ ತಿಳಿಸಿದರು.
ಪಕ್ಷದಲ್ಲಿ ನಡೆಯುತ್ತಿರುವ ವಿದ್ಯಮಾನಗಳು ನಮಗೂ ಬೇಸರ ತರಿಸಿದೆ. ನಾನು ದೆಹಲಿಗೆ ತೆರಳಿ ಎಲ್ಲಾ ವಿಚಾರಗಳನ್ನು ವರಿಷ್ಠರ ಗಮನಕ್ಕೆ ತರುತ್ತೇನೆ. ಜೆ.ಪಿ ನಡ್ಡಾ ಅವರು ಬೆಂಗಳೂರಿಗೆ ಬಂದಿದ್ದಾಗ ನಾನು ಕೂಡ ಅರ್ಧ ಗಂಟೆ ಮಾತಾಡಿದ್ದೇನೆ. ರಾಜ್ಯ ಬಿಜೆಪಿಯಲ್ಲಿ ಏನೆಲ್ಲ ನಡೆಯುತ್ತಿದೆ ಎಂದು ನಡ್ಡಾರಿಗೆ ಸವಿಸ್ತಾರವಾಗಿ ಹೇಳಿದ್ದೇನೆ. ಒಟ್ಟಿನಲ್ಲಿ ಪಕ್ಷದಲ್ಲಿ ಎಲ್ಲ ಸರಿಯಾಗಬೇಕು. ಹೀಗಾಗಿ ಎಲ್ಲವನ್ನೂ ವರಿಷ್ಠರ ಗಮನಕ್ಕೆ ತಂದಿದ್ದೇವೆ. ಹೈಕಮಾಂಡ್ನ ತೀರ್ಮಾನಕ್ಕೆ ನಾವು ಬದ್ಧರಾಗಿರುತ್ತೇವೆ ಎಂದು ಹೇಳಿದರು.
ಅಧ್ಯಕ್ಷರ ಬದಲಾವಣೆ ಮಾಡುವುದು ಬಿಡುವುದು ಹೈಕಮಾಂಡ್ಗೆ ಬಿಟ್ಟ ವಿಚಾರ. ಬೊಮ್ಮಾಯಿಯವರು ದೆಹಲಿಯಲ್ಲಿ ಇದ್ದಾರೆ. ಅವರು ತಿಳಿಸಿದಾಗ ನಾನೂ ದೆಹಲಿಗೆ ತೆರಳುತ್ತೇನೆ. ಹೈಕಮಾಂಡ್ ಎಲ್ಲರ ಅಭಿಪ್ರಾಯವನ್ನು ಪರಿಗಣಿಸಿ ತೀರ್ಮಾನ ಮಾಡುತ್ತದೆ. ಯತ್ನಾಳ್ ಗುಂಪು ಈಗಾಗಲೇ ಹೈಕಮಾಂಡ್ ಗಮನಕ್ಕೆ ಎಲ್ಲ ವಿಚಾರ ತಂದಿದೆ. ಒಂದಷ್ಟು ಜನ ರಾಜ್ಯಾಧ್ಯಕ್ಷರ ಪರವಾಗಿಯೂ ಅಭಿಪ್ರಾಯ ಕೊಟ್ಟಿದ್ದಾರೆ ಎಂದರು.