ಹಾವೇರಿ, ಫೆ.05 (DaijiworldNews/AA): ಬಾಲಕನ ಗಾಯಕ್ಕೆ ಹೊಲಿಗೆ ಹಾಕುವ ಬದಲು ಫೆವಿಕ್ವಿಕ್ ಹಾಕಿದ ಘಟನೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಆಡೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಳೆದ ಜನವರಿ 14ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಗುರುಕಿಶನ್ ಅಣ್ಣಪ್ಪ ಹೊಸಮನಿ(7) ಎಂಬ ಬಾಲಕ ಆಟವಾಡುವಾಗ ಕೆನ್ನೆ ಭಾಗಕ್ಕೆ ಗಾಯ ಮಾಡಿಕೊಂಡಿದ್ದಾನೆ. ಆ ಗಾಯ ಆಳವಾಗಿ ಆಗಿದ್ದರಿಂದ ರಕ್ತ ಬಹಳ ಸುರಿಯುತ್ತಿತ್ತು. ಅದಕ್ಕೆ ಹೊಲಿಗೆ ಹಾಕಲೇಬೇಕಿತ್ತು. ಆದರೆ ಆಡೂರು ಸರ್ಕಾರಿ ಆಸ್ಪತ್ರೆ ನರ್ಸ್ ಜ್ಯೋತಿ ಹೊಲಿಗೆ ಹಾಕುವ ಬದಲಿಗೆ ಫೆವಿಕ್ವಿಕ್ ಹಾಕಿ ನಿರ್ಲಕ್ಷ್ಯ ತೋರಿದ್ದಾರೆ.
ಫೆವಿಕ್ವಿಕ್ ಹಾಕುವ ವಿಡಿಯೋವನ್ನು ಬಾಲಕನ ಪೋಷಕರು ಮೊಬೈಲ್ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ. ಬಳಿಕ ಈ ಬಗ್ಗೆ ಆಡೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ರಕ್ಷಾ ಸಮಿತಿಗೆ ದೂರು ನೀಡಿದ್ದಾರೆ. ಈ ಬಗ್ಗೆ ವರದಿ ಪಡೆದ ಡಿ.ಹೆಚ್ ಒ ರಾಜೇಶ್ ಸುರಗಿಹಳ್ಳಿ ಅವರು ಫೆವಿಕ್ವಿಕ್ ಹಾಕಿ ನಿರ್ಲಕ್ಷ್ಯ ತೋರಿದ ನರ್ಸ್ ಜ್ಯೋತಿಯನ್ನು ಅಮಾನತು ಮಾಡಲಿಲ್ಲ. ಬದಲಾಗಿ ನರ್ಸ್ ಜ್ಯೋತಿ ಅವರನ್ನು ಹಾವೇರಿ ತಾಲೂಕು ಗುತ್ತಲ ಆರೋಗ್ಯ ಸಂಸ್ಥೆಗೆ ನಿಯೋಜನೆ ಮಾಡಿ ಆದೇಶಿಸಿದ್ದಾರೆ,
ಇತ್ತ ಬಾಲಕನಿಗೆ ಫೆವಿಕ್ವಿಕ್ ಯಾಕೆ ಹಾಕಿದ್ದೀರಿ ಎಂದು ಪೋಷಕರು ಕೇಳಿದರೆ ನರ್ಸ್ ಜ್ಯೋತಿ ಹಾರಿಕೆ ಉತ್ತರ ನೀಡಿದ್ದಾರೆ. ಸ್ಟಿಚ್ ಹಾಕಿದರೆ ಬಾಲಕನ ಕೆನ್ನೆ ಮೇಲೆ ಕಲೆ ಆಗುತ್ತಿತ್ತು. ಹೀಗಾಗಿ ಚರ್ಮದ ಮೇಲಷ್ಟೇ ಫೆವಿಕ್ವಿಕ್ ಹಾಕಿ ಚಿಕಿತ್ಸೆ ನೀಡಿದ್ದೇನೆ. ನನಗೆ ತಿಳಿದ ಮಟ್ಟಿಗೆ ನಾನು ಚಿಕಿತ್ಸೆ ಮಾಡಿದ್ದೇನೆ. ನೀವು ಫೆವಿಕ್ವಿಕ್ ಹಚ್ಚಬೇಡಿ ನಾವು ಮುಂದೆ ಹೋಗುತ್ತೇವೆ ಅಂದಿದ್ದರೆ ರೆಫರ್ ಮಾಡುತ್ತಿದ್ದೆವು ಎಂದು ಉತ್ತರಿಸಿದ್ದಾರೆ.
ಒಂದು ವೇಳೆ ಫೆವಿಕ್ವಿಕ್ನಿಂದ ಏನಾದರೂ ರಿಯಾಕ್ಷನ್ ಆಗಿ ಬಾಲಕನಿಗೆ ಹೆಚ್ಚು ಕಮ್ಮಿಯಾಗಿದ್ದರೆ ಯಾರು ಹೊಣೆ? ಇವತ್ತು ಇವರಿಗೆ ನಾಳೆ ಇನ್ನೊಬ್ಬರಿಗೆ ಏನೇನು ಹಾಕಿ ಚಿಕಿತ್ಸೆ ನೀಡುತ್ತಾರೆ. ಹೀಗಾಗಿ ಇದು ಆಕಸ್ಮಿಕವಲ್ಲ. ನಿರ್ಲಕ್ಷ್ಯ, ಬೇಜವಾಬ್ದಾರಿತನ. ಹೀಗಾಗಿ ಈ ರೀತಿ ನಿರ್ಲಕ್ಷ್ಯ ತೋರಿದ ನರ್ಸ್ ಜ್ಯೋತಿಯನ್ನು ಅಮಾನತು ಮಾಡಬೇಕೆಂದು ಬಾಲಕನ ಪೋಷಕರು ಆಗ್ರಹಿಸಿದ್ದಾರೆ.