ಕೋಲಾರ, ಫೆ.05 (DaijiworldNews/AA): ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಬದಲಾಯಿಸುವಂತೆ ನಾನು ಒತ್ತಾಯ ಮಾಡಲ್ಲ. ಒಂದು ವೇಳೆ ನನಗೆ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅವಕಾಶ ಕೊಟ್ಟರೆ ನಿಭಾಯಿಸುವೆ ಎಂದು ಮಾಜಿ ಸಚಿವ ಶ್ರೀರಾಮುಲು ಪರೋಕ್ಷವಾಗಿ ತಿಳಿಸಿದ್ದಾರೆ.

ಈ ಬಗ್ಗೆ ಕೋಲಾರದಲ್ಲಿ ಮಾತನಾಡಿದ ಅವರು, ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾಗಿ ಇದ್ದರೆ, ಆಕಸ್ಮಿಕವಾಗಿ ಬದಲಾವಣೆಯಾದರೆ ನಾನು ರಾಜ್ಯಾಧ್ಯಕ್ಷನಾಗಲು ಸಿದ್ಧ. ಬಸನಗೌಡ ಯತ್ನಾಳ್ ನಮ್ಮ ಹೆಸರು ಪ್ರಸ್ತಾವನೆ ಮಾಡಿದ್ದಾರೆ. ದೊಡ್ಡ ಮನಸ್ಸಿನಿಂದ ಅವರು ನಮ್ಮ ಹೆಸರು ಪ್ರಸ್ತಾಪ ಮಾಡಿರುವುದು ಸಂತೋಷ. ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿರುವುದಕ್ಕೆ ನಮಗೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದರು.
ಯಡಿಯೂರಪ್ಪ ಅವರಿಂದ ಬೆಳೆದಿದ್ದೇವೆ. ಅವರು ಮನಸ್ಸು ಮಾಡಿ ನನಗೆ ಅವಕಾಶಕೊಟ್ಟರೆ ರಾಜ್ಯದ 224 ಕ್ಷೇತ್ರದಲ್ಲಿ ಸಂಘಟನೆ ಮಾಡಿ ಭಿನ್ನಾಭಿಪ್ರಾಯ ಶಮನ ಮಾಡುವೆ. ಮುಂಬರುವ 2028ರಲ್ಲಿ ಬಿಜೆಪಿ 150 ಸ್ಥಾನ ಗೆಲ್ಲುವ ಕೆಲಸ ಮಾಡುತ್ತೇನೆ. ಯಡಿಯೂರಪ್ಪ ಅವರ ಆಶೀರ್ವಾದ ಬೇಕಾಗಿದೆ. ಒಂದು ವೇಳೆ ಹೈಕಮಾಂಡ್ ಬದಲಾವಣೆ ಮಾಡಿದರೆ ನಾನು ಸಿದ್ಧ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು, ಇರುವ ಗೊಂದಲ ನಿವಾರಣೆಯಾಗಬೇಕು. ದೆಹಲಿಗೆ ಹೋಗಿರುವವರನ್ನು ಸಮಾಧಾನ ಮಾಡಬೇಕಾಗಿದೆ. ದಕ್ಷಿಣ ಭಾರತದ ಭೀಷ್ಮರಾಗಿರುವ ಯಡಿಯೂರಪ್ಪ ಮುಂದಾಳತ್ವ ತೆಗೆದುಕೊಳ್ಳಬೇಕಾಗಿದೆ. ವಿಜಯೇಂದ್ರ ಅವರು ಹೊಸದಾಗಿ ಅಧ್ಯಕ್ಷರಾಗಿದ್ದು, ಅನುಭವದ ಕೊರತೆಯಾಗಿದೆ. ಈ ಹಿನ್ನೆಲೆ ಯಡಿಯೂರಪ್ಪ ಮುಂದೆ ಬರಬೇಕು ಎಂದು ನುಡಿದರು.