ಪ್ರಯಾಗ್ರಾಜ್, ಫೆ.07(DaijiworldNews/TA): ಇತ್ತೀಚೆಗೆ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಕರ್ನಾಟಕದ ಉಪಮುಖ್ಯಮಂತ್ರಿಗಳು ಡಿ.ಕೆ.ಶಿವಕುಮಾರ್ ಅವರ ಪುತ್ರಿ ಐಶ್ವರ್ಯ ಭಾಗವಹಿಸಿದ್ದಾರೆ. ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿ ಭಕ್ತಿ ಭಾವವನ್ನು ಮೆರೆದಿರುವ ಐಶ್ವರ್ಯ, ಈ ಅದ್ಭುತ ಕ್ಷಣಗಳನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಮಹಾ ಕುಂಭಮೇಳಕ್ಕೆ ಭೇಟಿ ನೀಡಿದ ಡಿ.ಕೆ.ಶಿವಕುಮಾರ್ ಅವರ ಪುತ್ರಿ ಐಶ್ವರ್ಯ, ಇದು ಪದಗಳನ್ನು ಮೀರಿದ ಅನುಭವ ಎಂದು ವಿವರಿಸಿದ್ದಾರೆ. ತಮ್ಮ ಇನ್ಸ್ಟಾಗ್ರಾಂ ಪೋಸ್ಟ್ನಲ್ಲಿ ಅವರು ಬರೆದುಕೊಂಡಿದ್ದು, "ಪ್ರಪಂಚದ ಅತಿ ದೊಡ್ಡ ಕೂಟಗಳಲ್ಲಿ ಒಂದಾದ ಸಂಪೂರ್ಣ ಶಕ್ತಿ, ಏಕತೆ ಮತ್ತು ಆಧ್ಯಾತ್ಮಿಕ ಆಳವು ನನ್ನನ್ನು ಮಂತ್ರಮುಗ್ಧರನ್ನಾಗಿಸಿತು. ಭಕ್ತಿ, ಆಚರಣೆಗಳು ಮತ್ತು ಸಾಮೂಹಿಕ ಪ್ರಜ್ಞೆಯು ನಿಜವಾದ ದೈವಿಕತೆಯ ವಾತಾವರಣವನ್ನು ಸೃಷ್ಟಿಸಿತು," ಎಂದು ಹೇಳಿದ್ದಾರೆ. ಈ ಮೂಲಕ, ಮಹಾ ಕುಂಭಮೇಳದಲ್ಲಿ ಭಕ್ತಿ ಮತ್ತು ಆಧ್ಯಾತ್ಮಿಕ ಶಕ್ತಿಯ ಅನುಭವವನ್ನು ಐಶ್ವರ್ಯ ಹಂಚಿಕೊಂಡಿದ್ದಾರೆ.
ಅದರೊಂದಿಗೆ, ತಂದೆ ಡಿ.ಕೆ.ಶಿವಕುಮಾರ್ ಮಹಾ ಕುಂಭಮೇಳಕ್ಕೆ ಹೋಗುವ ಮುನ್ನ, ಐಶ್ವರ್ಯ ಅವರನ್ನು ಭೇಟಿ ಮಾಡಿ ಶುಭಾಶಯಗಳನ್ನು ನೀಡಿದ್ದರು. ಡಿಕೆಶಿ ಫೆ.9 ಮತ್ತು 10 ರಂದು ಕುಂಭಮೇಳಕ್ಕೆ ತೆರಳಲಿದ್ದಾರೆ ಎಂದು ಹೇಳಿದ್ದರು. 2025ರ ಮಹಾ ಕುಂಭಮೇಳವನ್ನು ಜ.13 ರಂದು ಅದ್ಧೂರಿಯಾಗಿ ಚಾಲನೆ ನೀಡಲಾಯಿತು. 144 ವರ್ಷಗಳ ನಂತರ ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಈ ಮಹಾ ಧಾರ್ಮಿಕ ಉತ್ಸವ ಫೆ.26 ರವರೆಗೆ ಮುಂದುವರಿಯಲಿದೆ ಸಹಸ್ರಾರು ಭಕ್ತರು ಈ ಪುಣ್ಯಸ್ನಾನದಲ್ಲಿ ಪಾಲ್ಗೊಂಡಿದ್ದಾರೆ.