ಕಾರವಾರ, ಫೆ.07 (DaijiworldNews/AA): ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆ ನಡೆಸಿ ಮರಳುತ್ತಿದ್ದ ಬೋಟ್ ಸಮುದ್ರದಲ್ಲಿ ಕಲ್ಲಿಗೆ ತಾಗಿ ಮುಳುಗಡೆಯಾಗಿದ್ದು, 6 ಮಂದಿ ಮೀನುಗಾರರನ್ನು ರಕ್ಷಣೆ ಮಾಡಿದ ಘಟನೆ ಭಟ್ಕಳದ ಬಂದರು ಬಳಿ ಸಂಭವಿಸಿದೆ.

ಉಡುಪಿ ಜಿಲ್ಲೆಯ ಬ್ರಹ್ಮಾವರದ ಸುರೇಶ್ ಎಂಬುವರಿಗೆ ಸೇರಿದ ಬೋಟ್ ಇದಾಗಿದ್ದು, ಬ್ರಹ್ಮಾವರದಿಂದ ಕುಮಟಾ ಭಾಗದಲ್ಲಿ ಮೀನುಗಾರಿಕೆ ನಡೆಸಿ ಭಟ್ಕಳ ಬಂದರಿಗೆ ಮರಳುತ್ತಿತ್ತು. ಮೀನನ್ನು ಇಳಿಸಲು ಬರುತ್ತಿದ್ದಾಗ ಭಟ್ಕಳ ಬಂದರು ಭಾಗದ ಸಮುದ್ರದಲ್ಲಿ ಬೋಟಿನ ತಳಭಾಗಕ್ಕೆ ಕಲ್ಲುಬಂಡೆ ತಾಗಿದೆ.
ಕಲ್ಲುಬಂಡೆ ಹೊಡೆದ ವೇಳೆ ತಳಭಾಗದಲ್ಲಿ ಬೋಟ್ ಸೀಳುಬಿಟ್ಟು ನೀರು ಹೊಕ್ಕಿದ್ದು ಸಮುದ್ರದಲ್ಲೇ ಮುಳುಗಿದೆ. ಬೋಟಿನಲ್ಲಿ ಮೀನುಗಳು ಹಾಗೂ ಹಲವು ಸಾಮಾನುಗಳಿದ್ದು ಎಲ್ಲವೂ ನೀರುಪಾಲಾಗಿದ್ದು 50 ಲಕ್ಷ ರೂ. ಹೆಚ್ಚು ನಷ್ಟ ಉಂಟಾಗಿದೆ. ರಕ್ಷಿಸಲ್ಪಟ್ಟ ಎಲ್ಲಾ ಮೀನುಗಾರರು ಸುರಕ್ಷಿತವಾಗಿದ್ದು ಸದ್ಯ ಭಟ್ಕಳ ಬಂದರಿನಲ್ಲಿ ಆಶ್ರಯ ಪಡೆದಿದ್ದಾರೆ ಎಂದು ತಿಳಿದುಬಂದಿದೆ.