ಬೆಂಗಳೂರು, ಫೆ.08 (DaijiworldNews/AA): ಅರವಿಂದ್ ಕೇಜ್ರಿವಾಲ್ ಸಾವಿರಾರು ವರ್ಷ ಇತಿಹಾಸ ಹೊಂದಿರುವ ಯುಮುನಾ ನದಿ ಮೇಲೆ ಕಳಂಕ ಹಾಕಿಬಿಟ್ರು. ಅಲ್ಲದೇ ಜೈಲಿನಲ್ಲಿದ್ದುಕೊಂಡು 2 ತಿಂಗಳು ಆಡಳಿತ ಸ್ಥಗಿತಗೊಳಿಸಿದ್ರು. ಇದರ ಶಾಪ ತಟ್ಟಿದ್ದು, ಇದೇ ಅವರ ಸೋಲಿಗೆ ಕಾರಣ. ಹಾಗಾಗಿ ಬಿಜೆಪಿಗೆ ಗೆಲುವಾಗಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ್, ಕಾರು, ಮಫ್ಲರ್, ನಿಮಿಷ ನಿಮಿಷಕ್ಕೂ ಕೆಮ್ಮೋದು, 2 ಬೆಡ್ರೂಮ್ ಫ್ಲ್ಯಾಟ್, ಈಗ ಶೀಷ್ ಮಹಲ್ ಅದರಲ್ಲಿ 25 ರೂಮ್ಗಳಿವೆ. ಕಾರು, ಎಸ್ಕಾರ್ಟ್ ಹೀಗೆ ರಾಜನ ರೀತಿಯ ಆಡಳಿತ ನೋಡಿ ಜನ ಬೇಸತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಸಾವಿರಾರು ವರ್ಷ ಇತಿಹಾಸ ಹೊಂದಿರುವ ಯುಮುನಾ ನದಿ ಮೇಲೆ ಕೇಜ್ರಿವಾಲ್ ಕಳಂಕ ಹಾಕಿಬಿಟ್ರು. ಯಮುನಾ ನದಿ ಒಂದು ದಿನಕ್ಕೆ ಮಲಿನ ಆಗಿಲ್ಲ. ದೆಹಲಿ ಜನ ಪ್ರತಿದಿನ ಕುಡಿಯುತ್ತಿದ್ದ, ಗಂಗೆ ಅಂತ ಪೂಜೆ ಮಾಡ್ತಿದ್ದ ನೀರಿನ ಮೇಲೆಯೇ ಕಳಂಕ ತಂದರು. ಸ್ವಚ್ಛತೆ ಮಾಡುವ ಕೆಲಸ ನದಿಯದ್ದಲ್ಲ. ಕೇಜ್ರಿವಾಲ್ ಸರಿಯಾಗಿ ನಿರ್ವಹಣೆ ಮಾಡದೇ ನದಿ ಮೇಲೆ ಆಪಾದನೆ ಮಾಡಿಬಿಟ್ಟರು. ಇದೇ ಅವರ ಸೋಲಿಗೆ ಕಾರಣ ಎಂದರು.
ಯಾರೇ ಸಿಎಂ ಜೈಲಿಗೆ ಹೋದಾಗ ರಾಜೀನಾಮೆ ಕೊಟ್ಟು ಅವರದ್ದೇ ಪಕ್ಷದ ಮತ್ತೊಬ್ಬರಿಗೆ ಆಡಳಿತ ನಡೆಸಲು ಅವಕಾಶ ಮಾಡಿಕೊಡಬೇಕಿತ್ತು. ಆದ್ರೆ ಇವರು 2 ತಿಂಗಳು ಜೈಲಿನಲ್ಲಿದ್ದುಕೊಂಡು ಆಡಳಿತ ಸ್ಥಗಿತಗೊಳಿಸಿದ್ರು, ಅದರ ಶಾಪ ತಟ್ಟಿದೆ. ಜೊತೆಗೆ ಕಾಂಗ್ರೆಸ್ ನೇತೃತ್ವದ ಇಂಡಿ ಒಕ್ಕೂಟವೇ ಕೇಜ್ರಿವಾಲ್ ದೊಡ್ಡ ಕಳ್ಳ, ಭ್ರಷ್ಟಾಚಾರಿ ಎಂದು ಹೇಳಿದಾಗ ಜನರಿಗೆ ಅರ್ಥವಾಯ್ತು. ಮಳ್ಳಿತರ ಬಂದು ಕಳ್ಳತನ ತರ ಆಗಿದ್ದಾನೆ ಎಂದು ಕಾಂಗ್ರೆಸ್ ಆಪಾದನೆ ಮಾಡಿತು. ಜೊತೆಗೆ ಪ್ರಧಾನಿ ಮೋದಿ ಅವರ ಆಡಳಿತ ಬಿಜೆಪಿ ಗೆಲುವಿಗೆ ಕಾರಣ ಎಂದು ಹೇಳಿದ್ದಾರೆ.