ಹುಬ್ಬಳ್ಳಿ, ಫೆ.08 (DaijiworldNews/AA): ನಕಾರಾತ್ಮಕ ತಂತ್ರಗಳಿಂದ ರಾಜಕೀಯ ಮಾಡುತ್ತಿದ್ದವರಿಗೆ ದೆಹಲಿ ಜನರು ತಕ್ಕ ಪಾಠ ಕಲಿಸಿದ್ದಾರೆ. ದೆಹಲಿಯಲ್ಲಿ ಅರಾಜಕತೆ ಸೃಷ್ಟಿ ಮಾಡುತ್ತಿದ್ದವರಿಗೆ ಕಪಾಳ ಮೋಕ್ಷವಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.

ದೆಹಲಿ ಚುನಾವಣಾ ಫಲಿತಾಂಶದ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೆಹಲಿಯಲ್ಲಿ ಪ್ರಧಾನಿಗಳ ನೇತೃತ್ವದಲ್ಲಿ ಬಿಜೆಪಿಗೆ ಜನ ಭರ್ಜರಿ ತೀರ್ಪು ಕೊಟ್ಟಿದ್ದಾರೆ. 46ಕ್ಕಿಂತ ಹೆಚ್ಚು ಸ್ಥಾನ ಬಿಜೆಪಿ ಈಗಾಗಲೇ ಗೆದ್ದಿದೆ. ಪ್ರಧಾನಿ ಮೋದಿ, ಜೆ.ಪಿ ನಡ್ಡಾ, ಅಮಿತ್ ಶಾ, ರಾಜನಾಥ್ ಸಿಂಗ್ ಮತ್ತು ದೆಹಲಿ ಜನತೆಗೆ ಧನ್ಯವಾದಗಳು ಎಂದಿದ್ದಾರೆ.
ನಾವು ಪ್ರಜಾಪ್ರಭುತ್ವವನ್ನು ನಂಬಿದ್ದೇವೆ. ಪ್ರಜಾಪ್ರಭುತ್ವದಲ್ಲಿ ಯಶಸ್ವಿಯಾದ ರಚನಾತ್ಮಕ ಹಾಗೂ ಪ್ರಬಲ ರಾಜಕೀಯ ಪಕ್ಷ ಇರಬೇಕು ಎನ್ನುವುದು ನಮ್ಮ ಅಭಿಲಾಷೆ. ಕಾಂಗ್ರೆಸ್ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಈ ಸ್ಥಿತಿ ಕಾಂಗ್ರೆಸ್ಗೆ ಒಳ್ಳೆಯದಲ್ಲ. ಈ ಬಗ್ಗೆ ಕಾಂಗ್ರೆಸ್ ಆತ್ಮಾವಾಲೋಕನ ಮಾಡಿಕೊಳ್ಳಬೇಕು. ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇದೆ ಅಂತ ಅಹಂಕಾರದಲ್ಲಿರುವವರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಕಿಡಿಕಾರಿದ್ದಾರೆ.