ಬೆಂಗಳೂರು, ಫೆ.08 (DaijiworldNews/AK): ಅರವಿಂದ ಕೇಜ್ರಿವಾಲ್ ಅವರ ವಾಲ್ ಸಂಪೂರ್ಣವಾಗಿ ಬಿದ್ದುಹೋಗಿದೆ ಎಂದು ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಅವರು ವಿಶ್ಲೇಷಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುತ್ತಿದ್ದ ಅಣ್ಣಾ ಹಜಾರೆ ಆಂದೋಲನದ ಸಂಪೂರ್ಣ ಸದುಪಯೋಗ ಪಡೆದು ಕೇಜ್ರಿವಾಲ್ ಅಧಿಕಾರದ ಗದ್ದುಗೆ ಏರಿದ್ದರು. ಅವರ ವಾಲ್ ಇದೀಗ ಬಿದ್ದು ಹೋಗಿದೆ ಎಂದು ನುಡಿದರು.
ನರೇಂದ್ರ ಮೋದಿಜೀ, ಅಮಿತ್ ಶಾ ಮತ್ತು ನಡ್ಡಾ ಅವರ ನೇತೃತ್ವದಲ್ಲಿ ಬಿಜೆಪಿ ದೆಹಲಿಯಲ್ಲಿ 48 ಸೀಟು ಪಡೆದು ಭಾರಿ ಬಹುಮತವನ್ನು ಪಡೆದಿದೆ. ಕೇಜ್ರಿವಾಲ್ ಅವರು ಭ್ರಷ್ಟಾಚಾರವನ್ನು ವಿರೋಧಿಸಿ ಅಧಿಕಾರಕ್ಕೆ ಬಂದಿದ್ದರು.ಆದರೆ, ಅದೇ ಭ್ರಷ್ಟಾಚಾರವನ್ನು ಮಾಡಿ ಲಿಕ್ಕರ್ ಗೇಟಿನ ಹಗರಣದಲ್ಲಿ ಜೈಲು ಸೇರಿದ ಸಿಸೋಡಿಯ, ಕೇಜ್ರಿವಾಲ್, ಸತ್ಯೇಂದ್ರ ಜೈನ್- ಇವರೆಲ್ಲರೂ ಈ ಚುನಾವಣೆಯಲ್ಲಿ ಸೋತಿದ್ದಾರೆ ಎಂದು ತಿಳಿಸಿದರು.
ಲೋಕಸಭಾ ಚುನಾವಣೆ ಬಳಿಕ ಬಿಜೆಪಿ ಕೆಳಮುಖವಾಗಿಲ್ಲ; ಮೇಲ್ಮುಖವಾಗಿ ವಿಜಯದ ದಾಪುಗಾಲನ್ನು ಇಡುತ್ತಿದೆ ಎಂದು ನರೇಂದ್ರ ಮೋದಿಜೀ, ಅಮಿತ್ ಶಾ ಮತ್ತು ನಡ್ಡಾ ಅವರ ನೇತೃತ್ವದಲ್ಲಿ ಬಿಜೆಪಿ ಸಾಬೀತು ಮಾಡಿದೆ ಎಂದು ವಿವರಿಸಿದರು. ಇದನ್ನು ರಾಷ್ಟ್ರ ರಾಜಧಾನಿ ದೆಹಲಿಯ ಚುನಾವಣೆ ಮತ್ತೊಮ್ಮೆ ಸಾಕ್ಷೀಕರಿಸಿದೆ ಎಂದು ಹೇಳಿದರು.