ನವದೆಹಲಿ, ಫೆ.09 (DaijiworldNews/AK): ಯಾವುದೇ ಒಂದು ಸಾಧನೆ ಮಾಡಲು, ನಮ್ಮ ಬಳಿ ಅವಶ್ಯಕವಾದ ಸಂಪನ್ಮೂಲಗಳು ಇಲ್ಲದೆ ಹೋದರೂ ಪರವಾಗಿಲ್ಲ, ಆತ್ಮವಿಶ್ವಾಸ ಮತ್ತು ದೃಢ ನಿಶ್ಚಯ ಇರಲೇಬೇಕು ಅಂತ ಅನೇಕ ಅಧಿಕಾರಿಗಳ ಯಶಸ್ಸಿನ ಕಥೆಗಳು ಕಾಣಬಹುದು. ಇಲ್ಲಿಯೂ ಸಹ ಅಂತಹದೇ ಐಎಎಸ್ ಅಧಿಕಾರಿ ಅನುರಾಧಾ ಪಾಲ್ ಅವರ ಒಂದು ಕಥೆ ಇದೆ.

ಅನುರಾಧಾ ಅವರು ಹರಿದ್ವಾರ ಗ್ರಾಮದ ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದವರು. ಅವರಿಗೆ ಸಾಕಷ್ಟು ಆರ್ಥಿಕ ಸಮಸ್ಯೆಗಳಿದ್ದವು. ಅವರ ತಂದೆ ಹಾಲು ಮಾರಾಟ ಮಾಡಿ ಕುಟುಂಬ ನಿರ್ವಹಣೆ ಮಾಡುತ್ತಿದ್ದರು. ತಮ್ಮ ವಿದ್ಯಾಭ್ಯಾಸಕ್ಕಾಗಿ ಹರಿದ್ವಾರದ ಜವಾಹರ್ ನವೋದಯ ವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದರು. ಅದರ ನಂತರ, ಅನುರಾಧಾ ಅವರು ತಮ್ಮ ಕಾಲೇಜು ಕೋರ್ಸ್ ಮುಗಿಸಲು ದೆಹಲಿಗೆ ಸ್ಥಳಾಂತರಗೊಂಡರು. ನಂತರ ಅವರು ಜಿಬಿ ಪಂತ್ ವಿಶ್ವವಿದ್ಯಾಲಯದಲ್ಲಿ ಬ್ಯಾಚುಲರ್ ಆಫ್ ಟೆಕ್ನಾಲಜಿಯನ್ನು ಓದಿದರು.
ಮನೆಯಲ್ಲಿನ ಪ್ರತಿಕೂಲ ಪರಿಸ್ಥಿತಿಗಳ ಪರಿಣಾಮವಾಗಿ ಅವರು ತಮ್ಮ ಓದಿನ ನಂತರ ಟೆಕ್ ಮಹೀಂದ್ರಾ ಕಂಪನಿಯಲ್ಲಿ ಕೆಲಸಕ್ಕೆ ಅಂತ ಸೇರಿಕೊಂಡರು.ಯುಪಿಎಸ್ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿರುವಾಗ ಏಕಕಾಲದಲ್ಲಿ ರೂರ್ಕಿಯ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಸಹ ಕೆಲಸ ಮಾಡಲು ಅನುರಾಧ ಅವರು ಪ್ರಾರಂಭಿಸಿದರು.
2012 ರಲ್ಲಿ, ಅವರು ತಮ್ಮ ಮೊದಲ ಪ್ರಯತ್ನದಲ್ಲಿ ಉತ್ತೀರ್ಣರಾದರು. ಆ ಸಮಯದಲ್ಲಿ ಅವರ ರ್ಯಾಂಕ್ 451 ಆಗಿತ್ತು. ಆದರೂ ಅವರು ದೆಹಲಿಯ ನಿರ್ವಾಣ ಐಎಎಸ್ ಅಕಾಡೆಮಿಗೆ ಸೇರಿಕೊಂಡು ತಮ್ಮ ಸಿದ್ಧತೆಯನ್ನು ಇನ್ನಷ್ಟು ಬಲವಾಗಿ ಮಾಡಿದರು. ಅವರು ಕೆಲಸ ಮಾಡುತ್ತಿದ್ದರೂ ಸಹ, ಹೆಚ್ಚು ತಮ್ಮ ಗುರಿಯನ್ನು ಸಾಧಿಸಲು ತನ್ನ ಸಮಯವನ್ನು ಬುದ್ಧಿವಂತಿಕೆಯಿಂದ ಬಳಸಿಕೊಂಡರು.
ತಮ್ಮ ಎರಡನೇ ಪ್ರಯತ್ನದಲ್ಲಿ 62ನೇ ರ್ಯಾಂಕ್ ಪಡೆದುಕೊಂಡರು, ಅವರು ಅಂತಿಮವಾಗಿ 2015 ರಲ್ಲಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಬಳಿಕ ಉತ್ತರಾಖಂಡದ ಬಾಗೇಶ್ವರದ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿದ್ದಾರೆ.