ಬೆಂಗಳೂರು, ಫೆ.09 (DaijiworldNews/AA): ರಾಜ್ಯ ಕಾಂಗ್ರೆಸ್ ಸರ್ಕಾರ ಬೆಲೆ ಏರಿಕೆಯಿಂದ ಜನರ ತಲೆ ಬೋಳಿಸುವ ಕಾರ್ಯಕ್ಕೆ ಕೈ ಹಾಕಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ತಿಳಿಸಿದ್ದಾರೆ.

ಮಲ್ಲೇಶ್ವರದ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶನಿವಾರ ಕಾಂಗ್ರೆಸ್ ಶಾಸಕ ಹರಿಪ್ರಸಾದ್ ಅವರು, ಈ ಗ್ಯಾರಂಟಿಗಳು ಸಾಕು, ಅಭಿವೃದ್ಧಿ ಕಡೆಗೆ ಗಮನ ಕೊಡಿ ಎಂದಿದ್ದಾರೆ. ಇದೀಗ ಸರ್ಕಾರ ಮೆಟ್ರೋ ದರ ಏರಿಸಿದೆ. ಹಾಲಿನ ದರ ಏರಿಕೆ, ಸ್ಟಾಂಪ್ ಡ್ಯೂಟಿ ಹೆಚ್ಚಳ, ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡಿದ್ದು, ದವಸ ಧಾನ್ಯಗಳ ಬೆಲೆ ಗಗನಕ್ಕೆ ಏರಿದೆ. ಇಷ್ಟೆಲ್ಲ ಆದರೂ ಯಾವುದಕ್ಕೆ ದರ ಏರಿಸಬೇಕು ಎಂಬುದರಲ್ಲಿ ಸರ್ಕಾರ ಬ್ಯೂಸಿಯಾಗಿದೆ. ಈ ಸರ್ಕಾರ ಎಲ್ಲ ವಿಚಾರದಲ್ಲೂ ಕೈಚೆಲ್ಲಿ ಕುಳಿತಿದೆ. ಇವರಿಗೆ ಗ್ಯಾರಂಟಿ ಯಾವುದೇ ಕಾರಣಕ್ಕೂ ಅದನ್ನು ರದ್ದು ಮಾಡುವುದಿಲ್ಲ ಎಂಬ ವಾದ ಒಂದೆಡೆ, ಇನ್ನೊಂದೆಡೆ ಬೆಲೆ ಏರಿಕೆ ಮೂಲಕ ಜನರ ತಲೆ ಬೋಳಿಸುವ ಕೆಲಸ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಇದೇ ವೇಳೆ ರಾಜ್ಯಪಾಲರು ಕ್ಷುಲ್ಲಕ ಕಾರಣಕ್ಕಾಗಿ ಸುಗ್ರೀವಾಜ್ಞೆಯನ್ನು ವಾಪಸ್ ಕಳಿಸಿದ್ದಾರೆ ಎಂಬ ಉಗ್ರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಿಲ್ಲಿ ಪೀಪಲ್ ಸ್ಟಾರ್ಟ್ ಸಿಲ್ಲಿ ಥಿಂಗ್ಸ್ ಓನ್ಲಿ ಎಂದರಲ್ಲದೆ, ಈ ಸರ್ಕಾರ ಬಂದಾಗಲೇ ಹೆಚ್ಚು ಕಡಿಮೆ ಸ್ಮಶಾನ ಸೇರುವ ಪರಿಸ್ಥಿತಿ ಬಂದಿದೆ. ಈ ಸರ್ಕಾರದ ಕೆಟ್ಟ ಹೆಸರು ಶೇ.99ಕ್ಕೆ ಹೋಗಿದೆ ಎಂದು ಟೀಕಿಸಿದರು.