ಬೆಂಗಳೂರು, ಫೆ.10 (DaijiworldNews/AK):ಮೆಟ್ರೋ ಪ್ರಯಾಣದರ ಏರಿಕೆಯನ್ನು ಹಿಂಪಡೆಯಬೇಕೆಂದು ಶಾಸಕ ರವಿ ಸುಬ್ರಹ್ಮಣ್ಯ ಅವರು ಆಗ್ರಹಿಸಿದ್ದಾರೆ.

ಬಿಜೆಪಿ ನಿಯೋಗವು ಇಂದು ಮೆಟ್ರೋ ಎಂ.ಡಿ. ಭೇಟಿಯಾಗಿದೆ. ಇಲ್ಲಿ ದೇಶದಲ್ಲೇ ಮೆಟ್ರೋ ದರ ಗರಿಷ್ಠ ಪ್ರಮಾಣದಲ್ಲಿ ಹೆಚ್ಚಿಸಿದ್ದಾರೆ. ಇದನ್ನು ಖಂಡಿಸುತ್ತೇವೆ. ಮೆಟ್ರೋ ಸಂಪಾದನೆ ಮಾಡುವ ಇಲಾಖೆ ಅಲ್ಲ, ಸೇವಾ ವಲಯ ಇದು; ನಗರದ ದಟ್ಟಣೆ ಕಡಿಮೆ ಮಾಡುವ ಸಲುವಾಗಿ ಮೆಟ್ರೊ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗಿದೆ. ಏಕಾಏಕಿ ದರ ಏರಿಕೆಯನ್ನು ನಾವು ಖಂಡಿಸುತ್ತೇವೆ ಎಂದು ಮಾಧ್ಯಮಗಳಿಗೆ ತಿಳಿಸಿದರು.
ಈಗಾಗಲೇ ರಾಜ್ಯ ಸರ್ಕಾರ ಜನರ ಮೇಲೆ ದರ ಏರಿಕೆಯ ಬರೆ ಎಳೆದಿದೆ. ಈಗ ಮೆಟ್ರೋ ದರ 46% ಏರಿಕೆ ಮಾಡಿ ಪ್ರಹಾರ ಮಾಡಲಾಗಿದೆ ಎಂದ ಅವರು, ಮೆಟ್ರೋ ನಿಲ್ದಾಣಗಳಲ್ಲಿ ಜನರಿಗೆ ಅಗತ್ಯ ಅನುಕೂಲಗಳನ್ನೂ ಮೆಟ್ರೋ ಮಾಡಲಿ ಎಂದು ಒತ್ತಾಯಿಸಿದರು.
ಮೆಟ್ರೋ ಸಾರ್ವಜನಿಕರಿಗಾಗಿ ಇದೆ. ಲಾಭವನ್ನೇ ನೋಡುವುದು ಸರಿಯಲ್ಲ; ಬೆಂಗಳೂರಿನ ವಾಹನ ದಟ್ಟಣೆ ಕಡಿಮೆ ಮಾಡಬೇಕು ಎಂಬ ದೃಷ್ಟಿಯಿಂದ ಇದು ಜಾರಿಯಾಗಿದೆ. ಅದಕ್ಕಾಗಿ ಕೇಂದ್ರ ಸರ್ಕಾರ ಅನುದಾನ ನೀಡಿದೆ. ಪ್ರಯಾಣದರ ಹೆಚ್ಚಳ ಸರಿಯಲ್ಲ ಎಂದು ಆಕ್ಷೇಪಿಸಿದರು.
ದರ ಹೆಚ್ಚಳ ಕೂಡಲೇ ಸ್ಥಗಿತಗೊಳಿಸಬೇಕು. ಜನರಿಗೆ ಬೇಕಿರುವ ಪಾರ್ಕಿಂಗ್ ನೀಡಬೇಕು. ಒಂದಷ್ಟು ಬೇಡಿಕೆ ಮುಂದಿಟ್ಟಿದ್ದೇವೆ. ಬೇಡಿಕೆ ಈಡೇರಿಸದಿದ್ದರೆ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.