ದಾವಣಗೆರೆ, ಫೆ.10 (DaijiworldNews/AK): ಗುಣಪಡಿಸಲಾಗದ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳು ಘನತೆಯಿಂದ ಮರಣಹೊಂದುವ ಹಕ್ಕು ಕರ್ನಾಟಕದಲ್ಲಿ ಜಾರಿಗೆ ಬಂದಿರುವುದು ದಯಾಮರಣದ ಅನುಷ್ಠಾನಕ್ಕೆ ಕೋರಿ ನಿರಂತರವಾಗಿ ನಡೆಸಿದ ಹೋರಾಟದ ಫಲ ಎಂದು ನಿವೃತ್ತ ಶಿಕ್ಷಕಿ ಎಚ್.ಬಿ.ಕರಿಬಸಮ್ಮ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರುಳು ಕ್ಯಾನ್ಸರ್ನಿಂಧ ಬಳಲುತ್ತಿದ್ದ ನಾನು 24 ವರ್ಷಗಳಿಂದ ದಯಾಮರಣಕ್ಕೆ ಹೋರಾಟ ನಡೆಸುತ್ತಿದ್ದೇನೆ. ನ್ಯಾಯಾಲಯದ ಮೆಟ್ಟಿಲು ಏರಿ ಕಾನೂನಾತ್ಮಕ ಹಕ್ಕು ಪಡೆಯಲು ಪ್ರಯತ್ನಿಸಿದ್ದೇನೆ. ಇಚ್ಛಾಮರಣಕ್ಕೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿರುವುದು ಹರ್ಷವುಂಟು ಮಾಡಿದೆ. ಕಾನೂನಾತ್ಮಕವಾಗಿ ಇಚ್ಛಾಮರಣ ಪಡೆದ ಮೊದಲ ವ್ಯಕ್ತಿ ನಾನಾಗಬೇಕು ಎಂಬ ಬಯಕೆ ಇದೆ. ಈ ಅವಕಾಶಕ್ಕೆ ಕಾಯುತ್ತಿದ್ದೇನೆ ಎಂದು ಹೇಳಿದರು.
ಬದುಕಿನಲ್ಲಿ ಹಲವು ಬಾರಿ ಸಾವಿನ ಮನೆಯ ಬಾಗಿಲು ಬಡಿದಿದ್ದೇನೆ. ಕಾಯಿಲೆಯಿಂದ ನರಳಿ ಸಂಕಟ ಅನುಭವಿಸಿದ್ದೇನೆ. ಆತ್ಮಹತ್ಯೆ ಮಾಡಿಕೊಳ್ಳಲು ಮನಸು ಒಪ್ಪಲಿಲ್ಲ.ಮರಣವೂ ಘನತೆಯಿಂದ ಇರಬೇ ಕು ಎಂಬುದು ನನ್ನ ಬಲವಾದ ನಂಬಿಕೆ. ವಿಶ್ವದ ಹಲವು ದೇಶಗಳಲ್ಲಿರುವ ಈ ಅವಕಾಶ ಭಾರತದಲ್ಲಿ ಏಕಿಲ್ಲ ಎಂಬ ಪ್ರಶ್ನೆ ಕಾಡಿತ್ತು ಎಂದು ಹೇಳಿದರು.