ಬೆಂಗಳೂರು, ಫೆ.11 (DaijiworldNews/AK): ರಾಜ್ಯದಲ್ಲಿ ಪ್ರಾಮಾಣಿಕ ಅಧಿಕಾರಿಗಳಿಗೆ ಕವಡೆ ಕಾಸಿನ ಬೆಲೆಯೂ ಇಲ್ಲ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ ಎಂದು ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಅವರು ತಿಳಿಸಿದ್ದಾರೆ.

ಇಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, ನಿನ್ನೆ ಭದ್ರಾವತಿಯಲ್ಲಿ ಭೂ ಮತ್ತು ಗಣಿ ವಿಜ್ಞಾನ ಇಲಾಖೆಯಲ್ಲಿ ಕೆಲಸ ಮಾಡುವ ಮಹಿಳೆ ಶ್ರೀಮತಿ ಜ್ಯೋತಿಯವರಿಗೆ ಶಾಸಕ ಸಂಗಮೇಶ್ ಅವರ ಪುತ್ರ ಬಸವೇಶ್ ಎಂಬವರು ಅತ್ಯಂತ ಕೆಳಮಟ್ಟದ ಭಾಷೆ ಉಪಯೋಗಿಸಿ ಬೈದಿದ್ದಾರೆ. ಆ ಭಾಷೆ ಉಪಯೋಗಿಸಲು ನನಗೂ ನಾಚಿಕೆ ಆಗುತ್ತದೆ ಎಂದು ನುಡಿದರು.
ಸಿದ್ದರಾಮಯ್ಯನವರು ಬಸವೇಶ್ ಅವರನ್ನು ಬಂಧಿಸಲು ಸೂಚಿಸಿ ಕಠಿಣ ಶಿಕ್ಷೆ ವಿಧಿಸುವಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು. ಇದುವರೆಗೆ ಯಾಕೆ ಬಸವೇಶರನ್ನು ಬಂಧಿಸಿಲ್ಲ ಎಂದು ಪ್ರಶ್ನಿಸಿದರು. ರಾಜ್ಯದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲವೇ? ಮಹಿಳೆಯರಿಗೆ ಹೇಗೆ ಬೇಕೋ ಹಾಗೆ ಬೈಯ್ಯುವುದೇ? ಎಂದು ಕೇಳಿದರು.
ರಾಜ್ಯದಲ್ಲಿ ಏನು ನಡೆಯುತ್ತಿದೆ. ಸಿದ್ದರಾಮಯ್ಯರಂಥ ಒಬ್ಬ ಸಮರ್ಥ ಮುಖ್ಯಮಂತ್ರಿ ರಾಜ್ಯದಲ್ಲಿ ಇದ್ದರೂ ಕೂಡ ಹೀಗಾಗುತ್ತಿದೆ ಎಂದರಲ್ಲದೆ, ಎರಡನೇ ಬಾರಿ ಸಿಎಂ ಆದ ಬಳಿಕ ಅವರು ಸಂಪೂರ್ಣ ವಿಫಲವಾಗಿದ್ದಾರೆ ಎಂದು ಟೀಕಿಸಿದರು. ಇಷ್ಟೊಂದು ದಾದಾಗಿರಿ, ಗೂಂಡಾಗಿರಿ ರಾಜ್ಯದಲ್ಲಿ ನಡೆಯುತ್ತಿದೆ. ರಾತ್ರಿ ಅಕ್ರಮವಾಗಿ ಮರಳುದಂಧೆ ತಡೆಗಟ್ಟಲು ಹೋದ ಅಧಿಕಾರಿಗೆ ಸಂಗಮೇಶರ ಸುಪುತ್ರ ಇಷ್ಟೊಂದು ದಾದಾಗಿರಿ, ಗೂಂಡಾಗಿರಿ ಮಾಡಿದ್ದಾರೆ. ಶ್ರೀಮತಿ ಜ್ಯೋತಿಯವರು ರಾತ್ರಿ ಅಕ್ರಮವಾಗಿ ಮರಳುದಂಧೆ ಮಾಡುತ್ತಿದ್ದ ವ್ಯಕ್ತಿಗಳನ್ನು ಬಂಧಿಸಲು ಹೋಗಿದ್ದರು. ಮರಳುದಂಧೆಗೆ ಬೆಂಬಲ ನೀಡುವ ಶಾಸಕ ಮತ್ತು ಅವರ ಪುತ್ರನ ಮೇಲೆ ಸರಕಾರ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಕೇಳಿದರು.