ಕಲಬುರಗಿ, ಫೆ.12 (DaijiworldNews/AA): ಶೀಘ್ರದಲ್ಲೇ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯಾಗಲಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸುಳಿವು ನೀಡಿದ್ದಾರೆ.

ಕಲಬುರಗಿಯ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೇಶಾದ್ಯಂತ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರ ನೇಮಕಾತಿ ಪ್ರಕ್ರಿಯೆ ಹಂತಹಂತವಾಗಿ ಕೈಗೊಳ್ಳಲಾಗುತ್ತಿದೆ. ಈಗಾಗಲೇ ಮೂರು ರಾಜ್ಯಗಳಲ್ಲಿ ಪಿಸಿಸಿ ಅಧ್ಯಕ್ಷರ ನೇಮಕ ಮಾಡಲಾಗಿದೆ. ಆದಷ್ಟು ಬೇಗ ಹಂತ ಹಂತವಾಗಿ ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ನೇಮಕ ನಡೆಯಲಿದೆ. ಇದಕ್ಕೆ ಕರ್ನಾಟಕ ಹೊರತಾಗಿಲ್ಲ ಎಂದು ತಿಳಿಸಿದರು.
ಗೃಹ ಸಚಿವ ಪರಮೇಶ್ವರ್ ಹಾಗೂ ಲೋಕೋಪಯೋಗಿ ಖಾತೆ ಸಚಿವ ಸತೀಶ್ ಜಾರಕಿಹೊಳಿ ತಮ್ಮನ್ನು ಭೇಟಿ ಮಾಡಿ ಚರ್ಚೆ ನಡೆಸಿದ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಈ ರಾಜ್ಯದವನು ಎಐಸಿಸಿ ಅಧ್ಯಕ್ಷನಾಗಿದ್ದೇನೆ. ಹೀಗಾಗಿ ನಮ್ಮ ರಾಜ್ಯದ ನಾಯಕರು ನನ್ನ ಭೇಟಿಯಾಗಲು ಬರುತ್ತಾರೆ. ನಮ್ಮ ಜೊತೆ ಆತ್ಮೀಯರಾಗಿ ಇರುವವರು ಪೋನ್ ಮಾಡಿ ಬರುತ್ತಾರೆ. ಹಾಗೆ ಬರುವವರನ್ನು ಬೇಡ ಎನ್ನಲು ಆಗುತ್ತಾ? ಅದರಲ್ಲಿ ಏನೂ ವಿಶೇಷ ಇಲ್ಲ. ಪರಮೇಶ್ವರ್, ಜಾರಕಿಹೊಳಿ ಭೇಟಿ ಬಗ್ಗೆ ಗೊಂದಲ ಸೃಷ್ಟಿಸುವುದು ಬೇಡ. ದಯವಿಟ್ಟು ಮಾಧ್ಯಮದವರು ಗೊಂದಲ ಸೃಷ್ಟಿಸಬೇಡಿ ಎಂದರು.