ನವದೆಹಲಿ, ಜೂ13(Daijiworld News/SS): ಕಿರ್ಗಿಸ್ತಾನದ ಬಿಶ್ಕೆಕ್ನಲ್ಲಿ ಜೂ.13, 14ರಂದು ನಡೆಯಲಿರುವ ಶಾಂಘೈ ಕೋ ಆಪರೇಟಿವ್ ಆರ್ಗನೈಸೇಷನ್ ಪ್ರಾದೇಶಿಕ ಸಭೆಯಲ್ಲಿ ಭಾಗವಹಿಸಲು ಪಾಕ್ ಮಾರ್ಗದ ಮೂಲಕ ವಿಮಾನದಲ್ಲಿ ತೆರಳಲು ಉದ್ದೇಶಿಸಿದ್ದ ಮೋದಿ ದಿಢೀರ್ ನಿರ್ಧಾರ ಬದಲಿಸಿದ್ದಾರೆ.
ಈ ನಿರ್ಧಾರದ ಮೂಲಕ ನೆರೆಯ ಪಾಕಿಸ್ತಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತೊಂದು ರಾಜತಾಂತ್ರಿಕ ಆಘಾತ ನೀಡಿದ್ದಾರೆ. ಪಾಕ್ ಬದಲು ಒಮನ್ ಮಾರ್ಗದ ಮೂಲಕ ಪ್ರಯಾಣಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಕೆಲ ದಿನಗಳ ಹಿಂದೆಯಷ್ಟೇ ಮೋದಿ ಅವರ ವಿವಿಐಪಿ ವಿಮಾನ ಪಾಕ್ ವಾಯುಮಾರ್ಗದ ಮೂಲಕ ತೆರಳಲು ಅನುಮತಿ ನೀಡುವಂತೆ ಭಾರತ ಮನವಿ ಮಾಡಿತ್ತು. ಇದಕ್ಕೆ ಪಾಕಿಸ್ತಾನ ಸಮ್ಮತಿ ನೀಡಿತ್ತು. ಆದರೆ ಇದೀಗ ಪ್ರಧಾನಿ ಮೋದಿ ದಿಢೀರ್ ನಿರ್ಧಾರ ಬದಲಿಸಿದ್ದಾರೆ.
ಶಾಂಘೈ ಶೃಂಗಸಭೆಯಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಕೂಡ ಭಾಗವಹಿಸಲಿದ್ದಾರೆ. ಆದರೆ ಪ್ರಧಾನಿ ಮೋದಿ ಮತ್ತು ಇಮ್ರಾನ್ ನಡುವೆ ಯಾವುದೇ ಮಾತುಕತೆ ನಿಗದಿಯಾಗಿಲ್ಲ ಎಂದು ತಿಳಿದುಬಂದಿದೆ.
ಫೆ.26ರಂದು ಭಾರತೀಯ ವಾಯಸೇನೆಯ ವಿಮಾನಗಳು ಪಾಕಿಸ್ತಾನದ ಗಡಿ ದಾಟಿ ಉಗ್ರರ ತರಬೇತಿ ಕೇಂದ್ರಗಳ ಮೇಲೆ ದಾಳಿ ನಡೆಸಿದ ಬಳಿಕ ಪಾಕ್ ತನ್ನ ವಾಯುಮಾರ್ಗಗಳಲ್ಲಿ ಭಾರತದ ವಿಮಾನಗಳಿಗೆ ನಿರ್ಬಂಧ ಹೇರಿದೆ.