ಚಂಡೀಗಡ, ಫೆ.14 (DaijiworldNews/AA): ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿರುವ 119 ಭಾರತೀಯರು ಶನಿವಾರ ತಾಯ್ನಾಡಿಗೆ ಮರಳುವ ಸಾಧ್ಯತೆ ಇದೆ.

ವಿವಿಧ ದೇಶಗಳಿಂದ ಬಂದಿರುವ ಅಕ್ರಮ ವಲಸಿಗರನ್ನು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಸರ್ಕಾರ ಗಡಿಪಾರು ಮಾಡುವ ನಿರ್ಧಾರ ಕೈಗೊಂಡಿತ್ತು. ಈ ಪ್ರಕ್ರಿಯೆಯ ಅಂಗವಾಗಿ ಕಳೆದ ವಾರ ಮೊದಲ ಹಂತದಲ್ಲಿ 104 ಭಾರತೀಯರನ್ನು ಅಮೆರಿಕ ಕಳುಹಿಸಿತ್ತು.
ಇದೀಗ ಎರಡನೇ ಹಂತದಲ್ಲಿ 119 ಜನರನ್ನು ಹೊತ್ತ ಅಮೆರಿಕದ ವಿಮಾನವು ಶನಿವಾರ ಅಮೃತಸರ ವಿಮಾನ ನಿಲ್ದಾಣಕ್ಕೆ ಬಂದಿಳಿಯುವ ಸಾಧ್ಯತೆಯಿದೆ. ಈ ವಿಮಾನವು ನಾಳೆ ಬೆಳಿಗ್ಗೆ 10 ಗಂಟೆಗೆ ಬರುವ ನಿರೀಕ್ಷೆಯಿದೆ ಎನ್ನಲಾಗಿದೆ.
ಶನಿವಾರ ಭಾರತಕ್ಕೆ ಮರಳುವ 119 ಮಂದಿ ಪೈಕಿ ಪಂಜಾಬ್ನ 67, ಹರಿಯಾಣದ 33, ಗುಜರಾತಿನ ಎಂಟು, ಉತ್ತರ ಪ್ರದೇಶದ ಮೂವರು, ಗೋವಾ, ಮಹಾರಾಷ್ಟ್ರ ಮತ್ತು ರಾಜಸ್ಥಾನದ ತಲಾ ಇಬ್ಬರು ಹಾಗೂ ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರದ ತಲಾ ಒಬ್ಬರು ಇದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಇದರೊಂದಿಗೆ ಅಮೆರಿಕವು ಇನ್ನಷ್ಟು ಅಕ್ರಮ ವಲಸಿಗರನ್ನು ಮತ್ತೊಂದು ವಿಮಾನದ ಮೂಲಕ ಫೆ. 16ರಂದು ಭಾರತಕ್ಕೆ ಕಳುಹಿಸಲಿದೆ ಎಂದು ತಿಳಿದುಬಂದಿದೆ.