ಬೆಂಗಳೂರು, ಫೆ.15 (DaijiworldNews/AA): ಇನ್ವೆಸ್ಟ್ ಕರ್ನಾಟಕ -2025ರ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಿಂದ ರಾಜ್ಯಕ್ಕೆ 10.27 ಲಕ್ಷ ಕೋಟಿ ರೂಪಾಯಿ ಬಂಡವಾಳ ಹರಿದುಬಂದಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರೊಂದಿಗೆ ಬೆಂಗಳೂರಿನಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 10 ಲಕ್ಷ ಕೋಟಿ ಬಂಡವಾಳ ಹರಿದುಬರುವ ನಿರೀಕ್ಷೆಯಿತ್ತು. ಅದಕ್ಕಿಂತ ಹೆಚ್ಚಿಗೆ ಬಂಡವಾಳ ಬಂದಿದೆ. ಈ ಪೈಕಿ 4.3 ಲಕ್ಷ ಕೋಟಿ ಹೂಡಿಕೆ ಅಂತಿಮವಾಗಿದ್ದು, 6.23 ಲಕ್ಷ ಕೋಟಿ ಮೊತ್ತದ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಉದ್ಯಮಿಗಳಿಗೆ ಅಗತ್ಯವಿರುವ ಎಲ್ಲ ಸಹಕಾರವನ್ನು ರಾಜ್ಯ ಸರ್ಕಾರ ನೀಡಲಿದೆ ಎಂದು ತಿಳಿಸಿದರು.
ನಂಜುಂಡಪ್ಪ ವರದಿಯ ಮೇಲೆ ಬಂಡವಾಳ ಹೂಡಿಕೆಯಲ್ಲಿ ಪ್ರೋತ್ಸಾಹಧನ, ಕಾರ್ಯ ಕ್ಷಮತೆ ಆಧಾರದ ಮೇಲೆ ಆರ್ಥಿಕ ನೆರವು ನೀಡಲಾಗುವುದು. ಜೊತೆಗೆ ಭೂಮಿ ಒದಗಿಸುತ್ತೇವೆ. ವಿಶೇಷವಾಗಿ ಮಹಿಳೆಯರಿಗೆ ಶೇಕಡ 5ರಷ್ಟು ಅವಕಾಶ ನೀಡುವುದು ಸೇರಿದಂತೆ ಹಲವು ನೆರವು ನೀಡಲಾಗುವುದು ಎಂದರು.
ಎಂ.ಬಿ. ಪಾಟೀಲ್, ಎರಡು ಮತ್ತು ಮೂರನೇ ಹಂತದ ನಗರಗಳಲ್ಲಿ ಬಂಡವಾಳ ಹೂಡಲು ಪ್ರತಿಷ್ಠಿತ ಕಂಪನಿಗಳು ಆಸಕ್ತಿ ತೋರಿವೆ. ಇದರಿಂದ 6 ಲಕ್ಷ ಉದ್ಯೋಗ ಸೃಷ್ಟಿಯಾಗುವ ಸಾಧ್ಯತೆಯಿದೆ. ಶೇಕಡ 75ರಷ್ಟು ಮಂದಿ ಬೆಂಗಳೂರು ಹೊರತುಪಡಿಸಿ ರಾಜ್ಯದ ವಿವಿಧ ಭಾಗಗಳಲ್ಲಿ ಹೂಡಿಕೆ ಮಾಡಲು ಉತ್ಸುಕರಾಗಿದ್ದಾರೆ. ಇದರಲ್ಲಿ ಶೇಕಡ 45ರಷ್ಟು ಉತ್ತರ ಕರ್ನಾಟಕ ಭಾಗಕ್ಕೆ ಬಂಡವಾಳ ಹರಿದುಬರಲಿದೆ ಎಂದು ಹೇಳಿದರು.
ಮಹಾತ್ವಾಕಾಂಕ್ಷೆಯ ಕ್ವಿನ್ ಸಿಟಿ ಯೋಜನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, 10 ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಹೊಸ ಕೈಗಾರಿಕಾ ನೀತಿಯಡಿ ತುಮಕೂರು, ವಿಜಯಪುರದಲ್ಲಿ ಕೈಗಾರಿಕಾ ಪಾರ್ಕ್, ಹುಬ್ಭಳ್ಳಿಯಲ್ಲಿ ಸ್ಟಾಟ್ ಅಪ್ ಪಾರ್ಕ್ ಉಳಿದ ಭಾಗಗಳಲ್ಲಿ ಡೀಪ್ ಟೆಕ್ ಪಾರ್ಕ್ ಮತ್ತು ಸ್ಪಿಪ್ಟ್ ಸಿಟಿ ಅಸ್ತಿತ್ವಕ್ಕೆ ಬರಲಿದೆ. ಡೀಪ್ ಟೆಕ್, ಸ್ಪಿಪ್ಟ್ ಸಿಟಿ ಯೋಜನೆಗಳಿಂದ ತಲಾ ಒಂದು ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಮಾಹಿತಿ ನೀಡಿದರು.