ಚಿತ್ರದುರ್ಗ, ಫೆ.15 (DaijiworldNews/AA): ಜಿಲ್ಲೆಯ ಮೂರು ಕಡೆಗಳಲ್ಲಿ ಸುಮಾರು 164 ಕೋಟಿ ರೂಪಾಯಿ ವೆಚ್ಚದಲ್ಲಿ ರೈಲ್ವೆ ಮೇಲ್ಸೇತುವೆಗಳ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿದೆ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದ್ದಾರೆ.

ಈ ವಿಚಾರವಾಗಿ ಚಿತ್ರದುರ್ಗದಲ್ಲಿ ಮಾತನಾಡಿದ ಅವರು, ಈ ಭಾಗದ ಜನರ ಬಹುದಿನಗಳ ಕನಸು ಈಡೇರಿಸಲು ಸಮ್ಮತಿ ನೀಡಿದ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಅವರನ್ನು ಅಭಿನಂದಿಸುವುದಾಗಿ ತಿಳಿಸಿದರು.
ಚಿತ್ರದುರ್ಗದಿಂದ ದಾವಣಗೆರೆ ರಸ್ತೆಯಲ್ಲಿ ಬರುವ ರೈಲ್ವೆ ಗೇಟ್-22ರ ಮೇಲ್ಸೇತುವೆ ನಿರ್ಮಾಣಕ್ಕೆ 78.66 ಕೋಟಿ, ಹೊಳಲ್ಕೆರೆ ತಾಲೂಕಿನ ಚಿಕ್ಕಜಾಜೂರು ಬಳಿ ರೈಲ್ವೆ ಗೇಟ್-1ರ ಮೇಲ್ಸೇತುವೆ ನಿರ್ಮಾಣಕ್ಕೆ 51.72 ಕೋಟಿ ಹಾಗೂ ಚಿಕ್ಕಜಾಜೂರು-ಚಿತ್ರದುರ್ಗ ಮಧ್ಯ ಬರುವ ಹಳಿಯೂರು ರೈಲ್ವೆ ಗೇಟ್-15ರ ಮೇಲ್ಸೇತುವೆ ನಿರ್ಮಾಣಕ್ಕೆ 33.65 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗಳಿಗೆ ಸಮ್ಮತಿ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಕೆಲವು ಕಡೆ ಜಮೀನು ಭೂಸ್ವಾಧೀನ ಆಗಬೇಕಾಗಿದ್ದು, ರಾಜ್ಯ ಸರ್ಕಾರ ಜಮೀನು ಭೂಸ್ವಾಧೀನ ಮಾಡಿಕೊಡುವಂತೆ ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರ ಮೂಲಕ ರಾಜ್ಯ ಸರ್ಕಾರಕ್ಕೆ ಒತ್ತಡ ಹಾಕುವ ಕೆಲಸ ಮಾಡಬೇಕಾಗಿದೆ ಎಂದರು.