ಹುಬ್ಬಳ್ಳಿ, ಫೆ.16 (DaijiworldNews/AA): ಸಿಎಂ ಕುರ್ಚಿಗಾಗಿ ಕಾಂಗ್ರೆಸ್ನಲ್ಲಿ ಫೈಟ್ ಆಗುತ್ತಿದೆ. ಇದೇ ಕಾರಣಕ್ಕೆ ಈ ಸರ್ಕಾರ ಪತನವಾಗಲಿದೆ ಎಂದು ಸಂಸದ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಆಸ್ತಿತ್ವಕ್ಕೆ ಬಂದಾಗಲೇ ಸಿಎಂ ಆಯ್ಕೆಯ ಗೊಂದಲ ಸೃಷ್ಟಿಯಾಗಿತ್ತು. ಈ ವಿಚಾರದಲ್ಲಿ ಆರಂಭದಲ್ಲೇ ಒಂದು ಒಪ್ಪಂದ ಆಗಿದೆ ಎಂಬ ಮಾತಿದೆ. ಸಹಜವಾಗಿ ಈಗ ಸಿಎಂ ಸ್ಥಾನಕ್ಕೆ ಒಳಗಡೆ ಫೈಟ್ ನಡೆಯುತ್ತಿದೆ. ಇದೇ ಕಾರಣದಿಂದಲೇ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದರು.
ಕಾಂಗ್ರೆಸ್ನಲ್ಲಿ ಡಿಕೆಶಿ ಮತ್ತು ಸಿದ್ದರಾಮಯ್ಯ ತಂತ್ರ ಪ್ರತಿತಂತ್ರ ಮಾಡುತ್ತಿದ್ದಾರೆ. ಬಹಳ ದಿನ ಈ ಸರ್ಕಾರ ಮುಂದುವರೆಯುವುದಿಲ್ಲ. ಡಿಕೆಶಿ ಬೇರೆಯವರಿಂದ ಸಿಎಂ ಬದಲಾವಣೆ ಬಗ್ಗೆ ಹೇಳಿಸುತ್ತಿದ್ದಾರೆ. ಇಂತಹ ಬೆಳವಣಿಗೆಯಿಂದ ಆಡಳಿತ ಸಂಪೂರ್ಣ ಕುಸಿತವಾಗಿದೆ ಎಂದು ಹೇಳಿದರು.
ಸಿದ್ದರಾಮಯ್ಯ ಬಿಟ್ಟರೆ ನಾಯಕತ್ವಕ್ಕೆ ಯಾರು ಅರ್ಹರಿಲ್ಲ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿ, ಯಾರು ಕೂಡ ಅನಿವಾರ್ಯ ಅಲ್ಲ. ಬದಲಾವಣೆ ಜಗದ ನಿಯಮ. ಅದು ಅವರ ಪಕ್ಷಕ್ಕೆ ಬಿಟ್ಟ ವಿಚಾರ. ಸಿಎಂ ರಾಜೀನಾಮೆ ಕೊಡಿಸಬೇಕು ಎಂಬ ವಿಚಾರ ಬಂದಾಗ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಕೌಂಟರ್ ಕೊಡಲಾಗುತ್ತಿದೆ. ಕಾಂಗ್ರೆಸ್ ಪಕ್ಷದಲ್ಲಿ ತಂತ್ರ ಪ್ರತಿತಂತ್ರ ನಡೆಯುತ್ತಿದೆ ಎಂದು ನುಡಿದರು.