ಬೆಂಗಳೂರು, ಫೆ.17 (DaijiworldNews/AA): ನಾನು ಯಾರಿಂದಲೂ ಶಿಸ್ತಿನ ಪಾಠ ಮಾಡಿಸಿಕೊಳ್ಳಬೇಕಿಲ್ಲ. 50 ವರ್ಷ ಪಕ್ಷಕ್ಕೆ ಕೆಲಸ ಮಾಡಿದ್ದೇನೆ. ನಾನು ಮಾತನಾಡಿದರೆ ಸತ್ಪರಿಣಾಮ ಬೀರುವ ಮಾತನಾಡುತ್ತೇನೆಯೇ ಹೊರತು ದುಷ್ಪರಿಣಾಮ ಬೀರುವ ಮಾತನಾಡಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಕೆ.ಎನ್ ರಾಜಣ್ಣ ತಿರುಗೇಟು ನೀಡಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಸಿಎಂ ಹೆಸರು ದುರ್ಬಳಕೆ ಮಾಡಿಕೊಳ್ಳೋದು ಬೇಡ ಎಂಬ ಡಿಕೆಶಿ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಸಿಎಂ ಹೆಸರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಅನ್ನೋದು ಹೇಳಿಕೆ ಅಷ್ಟೇ, ಎಚ್ಚರಿಕೆ ಅಲ್ಲ. ಎಚ್ಚರಿಕೆ ಗಿಚ್ಚರಿಕೆ ಎಲ್ಲಾ ನಡೆಯಲ್ಲ, ಎಚ್ಚರಿಕೆನಾ ಯಾರು ಕೇಳ್ತಾರೆ ಎಂದು ಕಿಡಿಕಾರಿದ್ದಾರೆ.
ಮುಂದುವರೆದು ನಾವು ಯಾರ ಹೆಸರನ್ನು ದುರ್ಬಳಕೆ ಮಾಡಿಕೊಂಡಿಲ್ಲ. ಅವರು ಎಐಸಿಸಿ ಹೆಸರನ್ನ ದುರ್ಬಳಕೆ ಮಾಡಿಕೊಳ್ಳುವುದು ಬೇಡ. ಎಲ್ಲದಕ್ಕೂ ಎಐಸಿಸಿ ಹೇಳಿದೆ ಎಂದು ಎಐಸಿಸಿ ಹೆಸರನ್ನ ಅವರು ದುರ್ಬಳಕೆ ಮಾಡಿಕೊಳ್ಳಬಾರದು. ಇದು ಆರೋಪ ಅಲ್ಲ ವಾಸ್ತವ ಎಂದು ವಾಗ್ದಾಳಿ ಮಾಡಿದ್ದಾರೆ.
ಪೂರ್ಣಾವಧಿ ಸಿಎಂ ವಿಚಾರದಲ್ಲಿ ನಾನೇನು ಹಟಕ್ಕೆ ಬಿದ್ದಿಲ್ಲ. ಅಂತಿಮ ನಿರ್ಧಾರ ಹೈಕಮಾಂಡ್ ಮಾಡಲಿದೆ. ಹೈಕಮಾಂಡ್ ಹೇಳಿದಂತೆ ಲೋಕಸಭೆ ಚುನಾವಣೆಯವರೆಗೆ ಅಧ್ಯಕ್ಷ ಅನ್ನೋ ಕಾರಣಕ್ಕೆ ಕೇಳಿದ್ದೇವೆ. ಉಪ ಮುಖ್ಯಮಂತ್ರಿ ಸ್ಥಾನ ಹೆಚ್ಚುವರಿ ಕೊಟ್ಟಿದ್ದರೆ, ಲೋಕಸಭೆ ಚುನಾವಣೆಯಲ್ಲಿ ಸಹಾಯ ಆಗುತ್ತಿತ್ತು ಈಗ ಕೇಳಲ್ಲ. ಡಿಸಿಎಂ ಸ್ಥಾನ ಅಂದರೆ ಏನು ತಲೆ ಮೇಲೆ ಹೆಚ್ಚುವರಿ ಕಿರೀಟ ಇರಲ್ಲ ಎಂದು ಗುಡುಗಿದ್ದಾರೆ.