ಬೆಂಗಳೂರು, ಫೆ.18 (DaijiworldNews/AK): ರಾಜ್ಯದ ಕಾಂಗ್ರೆಸ್ ಸರಕಾರದ ಖಜಾನೆ ಸಂಪೂರ್ಣವಾಗಿ ಖಾಲಿಯಾಗಿದೆ ಎಂದು ರಾಜ್ಯ ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಅವರು ಆರೋಪಿಸಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ” ದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈಗ ಹಾಲಿನ ದರವನ್ನು ಪ್ರತಿ ಲೀಟರಿಗೆ 5 ರೂ. ಹೆಚ್ಚಿಸುವುದಾಗಿ ಸರಕಾರ ಹೇಳುತ್ತಿದೆ. ಯಾವಾಗ ಮಾಡುತ್ತಾರೋ ಗೊತ್ತಿಲ್ಲ; ಕೇಂದ್ರದಿಂದ 5 ಕೆಜಿ ಅಕ್ಕಿ ಸಿಗುತ್ತಿದೆ. ಆದರೆ, ರಾಜ್ಯ ಸರಕಾರದ 5 ಕೆಜಿ ಪಡಿತರ ಅಕ್ಕಿ ಸಂಬಂಧ ಫಲಾನುಭವಿಯ ಖಾತೆಗೆ ಹಣ ವರ್ಗಾಯಿಸಿಲ್ಲ ಎಂದು ಮಾಹಿತಿ ಇರುವುದಾಗಿ ತಿಳಿಸಿದರು.
ಹೈಸ್ಕೂಲ್ ಮತ್ತು ಪದವಿಪೂರ್ವ ಕಾಲೇಜಿನಲ್ಲಿ ಅತಿಥಿ ಶಿಕ್ಷಕರಾಗಿ ದುಡಿಯುವವರಿಗೆ ಐದಾರು ತಿಂಗಳಿಂದ ವೇತನ ಕೊಡುತ್ತಿಲ್ಲ; ಮೆಟ್ರೋ ದರ ಹೆಚ್ಚಿಸಿದ್ದು, ಹಾಲು, ವಿದ್ಯುತ್ ದರ ಏರಿಸುತ್ತಿದ್ದಾರೆ. ಸಿದ್ದರಾಮಯ್ಯನವರ ಎರಡನೇ ಅವಧಿಯ ಆಡಳಿತ ಸಂಪೂರ್ಣವಾಗಿ ನೆಲಕಚ್ಚಿ ಹೋಗಿದೆ ಎಂದು ಟೀಕಿಸಿದರು. ಗ್ಯಾರಂಟಿ ಸರಿಯಾಗಿ ಅನುಷ್ಠಾನಗೊಳಿಸುತ್ತಿಲ್ಲ; ಈ ಸರಕಾರ ಸಂಪೂರ್ಣ ದಿವಾಳಿಯಾಗಿದೆ ಎಂದರು.
ವಿವಿ ಬಂದ್ ಮಾಡುವ ನಿರ್ಧಾರ ಮೂರ್ಖತನದ ಪರಮಾವಧಿ
ಕಾಂಗ್ರೆಸ್ ಸರಕಾರವು ಹಿಂದುಳಿದ ಜಿಲ್ಲೆಗಳ ಹೊಸ ವಿಶ್ವವಿದ್ಯಾಲಯಗಳನ್ನು ಬಂದ್ ಮಾಡುತ್ತಿದೆ. ಕೊಪ್ಪಳ, ಹಾವೇರಿ, ಚಾಮರಾಜನಗರ, ಬೀದರ್- ಈ ಥರದ ಹಿಂದುಳಿದ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಬರೆ ಹಾಕುವ ಈ ಸರಕಾರದ ನಿರ್ಧಾರ ಮೂರ್ಖತನದ ಪರಮಾವಧಿ ಎಂದು ಎನ್.ರವಿಕುಮಾರ್ ಅವರು ಆಕ್ಷೇಪಿಸಿದರು.
ಹಿಂದುಳಿದ ಜಿಲ್ಲೆಗಳಲ್ಲಿ ಉನ್ನತ ಶಿಕ್ಷಣದ ಪ್ರಮಾಣ ಹೆಚ್ಚಾಗಬೇಕೆಂಬ ಉದ್ದೇಶದಿಂದ ಹೊಸ ವಿಶ್ವವಿದ್ಯಾಲಯ ತೆರೆಯಲಾಗಿತ್ತು. ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದರು ಎಂಬ ಗಾದೆಮಾತಿನಂತೆ ಸರಕಾರದ ಬಳಿ ವೇತನ ಕೊಡಲು ಹಣ ಇಲ್ಲ ಎಂದು ವಿದ್ಯಾರ್ಥಿಗಳಿಗೆ ಬರೆ ಹಾಕುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.ಸರಕಾರ ತನ್ನ ನಿರ್ಧಾರವನ್ನು ಪರಿಶೀಲಿಸಬೇಕೆಂದು ಮನವಿ ಮಾಡಿದರು.
2016-17ರಲ್ಲಿ ಉನ್ನತ ಶಿಕ್ಷಣಕ್ಕೆ ಬಜೆಟ್ನ ಶೇ 6 ಹಣವನ್ನು ಕೊಡಲಾಗಿತ್ತು. ಈ ಸರಕಾರ ಕೇವಲ ಶೇ 1.76 ಹಣವನ್ನಷ್ಟೇ ಕೊಟ್ಟಿದೆ. ವಿವಿ, ಕಾಲೇಜುಗಳಿಗೆ ಹಣವನ್ನೇ ಕೊಡದೆ ಇದ್ದರೆ ಶಿಕ್ಷಣ ಸಂಸ್ಥೆಗಳು ನಡೆಯುವುದಾದರೂ ಹೇಗೆ ಎಂದು ಕೇಳಿದರು.ಬಿಜೆಪಿ ಇದ್ದಾಗ ತೆರೆದ ಯೂನಿವರ್ಸಿಟಿ ಎಂದು ರಾಜಕೀಯ ದ್ವೇಷದಿಂದ ಬಂದ್ ಮಾಡಿದರೆ, ಇದು ರಾಜ್ಯಕ್ಕೆ ಮಾಡುವ ಅಪಮಾನ ಎಂದು ತಿಳಿಸಿದರು.
ಕಾಂಗ್ರೆಸ್ ಸರಕಾರ ಇದೆಯೇ ಅಥವಾ ಸತ್ತುಹೋಗಿದೆಯೇ?
ಉದಯಗಿರಿ ಘಟನೆ ಕುರಿತು ಪ್ರಸ್ತಾಪಿಸಿದ ಅವರು, ನಿನ್ನೆ ಬಿ.ಕೆ.ಹರಿಪ್ರಸಾದ್ ಅವರು ಇದರೊಳಗೆ ಆರೆಸ್ಸೆಸ್ ಕಾರ್ಯಕರ್ತರ, ನಾಯಕರ, ಸ್ವಯಂಸೇವಕರ ಕೈವಾಡ ಇದೆ; ಬುರ್ಖಾ ಹಾಕಿ ಬಂದು ಆರೆಸ್ಸೆಸ್ಸಿನವರು ಗಲಾಟೆ ಮಾಡಿದ್ದಾರೆ; ಕಲ್ಲೆಸೆದಿದ್ದಾರೆ ಎಂದು ತಿಳಿಸಿದ್ದಾರೆ. ಈ ಥರ ಹೇಳುವ ಬಿ.ಕೆ.ಹರಿಪ್ರಸಾದ್ ಮತ್ತಿತರ ಕಾಂಗ್ರೆಸ್ ನಾಯಕರಿಗೆ ನಿಮ್ಮ ಸರಕಾರ ಇದೆಯೇ ಅಥವಾ ಸತ್ತು ಹೋಗಿದೆಯೇ ಎಂಬ ಪ್ರಶ್ನೆ ಕೇಳಲು ಬಯಸುವುದಾಗಿ ತಿಳಿಸಿದರು.