ನವದೆಹಲಿ, ಫೆ.18 (DaijiworldNews/AA): ತನ್ನ ವಿರುದ್ಧ ದಾಖಲಾಗಿರುವ ವಿವಿಧ ಎಫ್ಐಆರ್ಗಳನ್ನು ಒಟ್ಟುಗೂಡಿಸಿ ಮಧ್ಯಂತರ ರಕ್ಷಣೆ ಕೋರಿ ಯೂಟ್ಯೂಬರ್ ರಣವೀರ್ ಅಲ್ಹಾಬಾದಿಯಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಇಡೀ ದೇಶದ ಪೋಷಕರನ್ನು ನೀವು ಅವಮಾನಿಸಿದ್ದೀರಿ ಎಂದು ರಣವೀರ್ ಅಶ್ಲೀಲ ಹೇಳಿಕೆ ವಿರುದ್ಧ ಕಿಡಿಕಾರಿದೆ.

ಇಂಡಿಯಾಸ್ ಗಾಟ್ ಲ್ಯಾಟೆಂಟ್ ಕಾರ್ಯಕ್ರಮದ ಇತ್ತೀಚಿನ ಸಂಚಿಕೆಯಲ್ಲಿ ಅಶ್ಲೀಲ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಮಹಾರಾಷ್ಟ್ರ, ಅಸ್ಸಾಂ ಮತ್ತು ರಾಜಸ್ಥಾನದಲ್ಲಿ ದಾಖಲಾಗಿರುವ ಎಫ್ಐಆರ್ಎಸ್ ಅಡಿ ರಣವೀರ್ ಬಂಧನಕ್ಕೆ ಸುಪ್ರೀಂಕೋರ್ಟ್ ಇಂದು ತಡೆ ನೀಡಿದೆ. ಇಂದು ಪ್ರಕರಣ ವಿಚಾರಣೆ ನಡೆಸಿದ ನ್ಯಾ ಸೂರ್ಯ ಕಾಂತ್ ಮತ್ತು ಎನ್ ಕೋಟಿಶ್ವರ್ ಸಿಂಗ್ ಪೀಠ ಪ್ರಕರಣಗಳಲ್ಲಿ ತನಿಖೆಗೆ ಸಹಕರಿಸುವಂತೆ ಸೂಚಿಸಿ ಯಾವುದೇ ಹೊಸ ಪ್ರಕರಣ ದಾಖಲಿಸಿದಂತೆ ನಿರ್ದೇಶಿಸಿ ರಣವೀರ್ ಬಂಧನಕ್ಕೆ ಮಧ್ಯಂತರ ತಡೆ ನೀಡಿದೆ.
ಇದೇ ವೇಳೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರ ಮತ್ತು ಮಹಾರಾಷ್ಟ್ರ ಮತ್ತು ಅಸ್ಸಾಂ ಸರ್ಕಾರಗಳಿಗೆ ನೋಟಿಸ್ ಜಾರಿ ಮಾಡಿದೆ. ಯಾವುದೇ ಬೆದರಿಕೆಗಳು ಬಂದ ಸಂದರ್ಭದಲ್ಲಿ ರಣವೀರ್ ಮಹಾರಾಷ್ಟ್ರ ಮತ್ತು ಅಸ್ಸಾಂ ಪೊಲೀಸರನ್ನು ಸಂಪರ್ಕಿಸಿ ತನಗೆ ಮತ್ತು ತನ್ನ ಕುಟುಂಬಕ್ಕೆ ರಕ್ಷಣೆ ಕೋರಬಹುದು ಎಂದು ಸುಪ್ರೀಂ ತಿಳಿಸಿದೆ.
ವಿಚಾರಣೆ ವೇಳೆ ಯೂಟ್ಯೂಬರ್ ರಣವೀರ್ ಅವರ ಹೇಳಿಕೆಗೆ ನ್ಯಾ. ಸೂರ್ಯಕಾಂತ್ ಆಕ್ಷೇಪ ವ್ಯಕ್ತಪಡಿಸಿದ್ದು, ನಿಮ್ಮ ಹೇಳಿಕೆ ಅಶ್ಲೀಲವಲ್ಲದಿದ್ದರೆ ಮತ್ತೇನು? ನೀವು ಯಾವಾಗ ಬೇಕಾದರೂ ನಿಮ್ಮ ಅಸಭ್ಯತೆಯನ್ನು ತೋರಿಸಬಹುದೇ? ಇಂತಹ ನಡವಳಿಕೆಯನ್ನು ಖಂಡಿಸಲೇಬೇಕು. ನೀವು ಜನಪ್ರಿಯರಾಗಿದ್ದೀರಿ ಎಂಬ ಕಾರಣಕ್ಕೆ ಸಮಾಜವನ್ನು ಹಗುರವಾಗಿ ಪರಿಗಣಿಸಲು ಸಾಧ್ಯವಿಲ್ಲ. ಈ ಭಾಷೆಯನ್ನು ಇಷ್ಟಪಡುವವರು ಭೂಮಿಯ ಮೇಲೆ ಯಾರಾದರೂ ಇದ್ದಾರೆಯೇ? ಇಷ್ಟಪಟ್ಟರೇ ಅವರ ಮನಸ್ಸಿನಲ್ಲಿ ಏನೋ ಕೊಳಕಿದೆ ಎಂದರ್ಥ. ನಾವು ನಿಮ್ಮನ್ನು ಯಾಕೆ ರಕ್ಷಿಸಬೇಕು? ನೀವು ಮತ್ತು ನಿಮ್ಮ ಬೆಂಬಲಿಗರು ಈ ಅಧಃಪತನದ ಮಟ್ಟಕ್ಕೆ ಇಳಿದಿದ್ದೀರಿ. ಕಾನೂನು ಮತ್ತು ವ್ಯವಸ್ಥೆಯ ನಿಯಮವನ್ನು ಪಾಲಿಸಬೇಕು ಎಂದರು.