ನವದೆಹಲಿ, ಜೂ 13(Daijiworld News/MSP): ಕಚೇರಿಯಲ್ಲಿ ನಿಗದಿತ ವೇಳೆಯಲ್ಲಿ ಹಾಜರಿರಬೇಕು, ಮನೆಯಿಂದಲೇ ಕೆಲಸ ನಿರ್ವಹಿಸುವ ಪ್ರವೃತ್ತಿಯನ್ನು ಬಿಟ್ಟುಬಿಡಬೇಕು ಎಂಬಿತ್ಯಾದಿ ವಿಚಾರಗಳ ಬಗ್ಗೆ ನೂತನ ಸಚಿವರಿಗೆ ಪ್ರಧಾನಿ ನರೇಂದ್ರ ಮೋದಿ ಕಟು ಎಚ್ಚರಿಕೆ ನೀಡಿದ್ದಾರೆ.
ಬುಧವಾರ ನಡೆದ ಮಂತ್ರಿ ಪರಿಷತ್ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಪ್ರಧಾನಿ ಮೋದಿ , ಪ್ರತಿ ದಿನ ಬೆಳಗ್ಗೆ ಸರಿಯಾಗಿ 9:30ಕ್ಕೆ ಕಚೇರಿಯಲ್ಲಿ ಹಾಜರಿರಬೇಕು ಎಂಬ ಖಡಕ್ ವಾರ್ನಿಂಗ್ನ್ನು ಸಚಿವರಿಗೆ ನೀಡಿದ್ದಾರೆ. ದುಂದು ವೆಚ್ಚಕ್ಕೆ ಕಡಿವಾಣ ಹಾಕಬೇಕು, ಭ್ರಷ್ಟಾಚಾರ ಮುಕ್ತವಾಗಿ ಕೆಲಸ ನಿರ್ವಹಿಸಬೇಕು ಎಂದು ಬುದ್ದಿಮಾತು ಹೆಳಿದ್ದಾರೆ. ಇದರೊಂದಿಗೆ ಹೊಸ ಜವಾಬ್ದಾರಿಗಳನ್ನ ಸಮರ್ಥವಾಗಿ ನಿಭಾಯಿಸುವಂತೆ ಹಿರಿಯ ಸಚಿವರಿಗೂ ಕೂಡ ಹೇಳಿದ್ದಾರೆ.
ರಾಜ್ಯ ಖಾತೆ ಸಚಿವರ ಪ್ರಾಮುಖ್ಯತೆ ಬಗ್ಗೆ ತಿಳಿಸಿ ಹೇಳಿದ ಪ್ರಧಾನಿ, ಅವರವರ ಇಲಾಖೆಗೆ ಸಂಬಂಧಿಸಿದ ಕಡತಗಳನ್ನು ಆಯಾ ಸಂಪುಟ ದರ್ಜೆಯ ಸಚಿವರ ಜತೆ ಹಂಚಿಕೊಂಡು ಚರ್ಚಿಸಿ ಅವರು ನೀಡುವ ಸಲಹೆ ಸೂಚನೆಗಳನ್ನ ಪಡೆದುಕೊಳ್ಳಿ ಎಂದು ಹೇಳಿದ್ದಾರೆ. ಕಣ್ಣುಮುಚ್ಚಿ ಯಾವುದೇ ಕಡತಗಳನ್ನು ಅಪ್ರೂವಲ್ ಮಾಡುವ ಮೊದಲು ಕಿರಿಯ ಸಚಿವರು ಹಾಗೂ ಹಿರಿಯ ಮಂತ್ರಿಗಳೊಂದಿಗೆ ಕುಳಿತು ಚರ್ಚಿಸಿ ಸಮಸ್ಯೆಗಳಿದ್ದರೆ ಬಗೆಹರಿಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.