ಹೈದರಾಬಾದ್, ಫೆ.18(DaijiworldNews/TA): ತೆಲುಗು ನಟ ಮನೋಜ್ ಮಂಚು ಅವರನ್ನು ತಿರುಪತಿ ಪೊಲೀಸರು ಸೋಮವಾರ ತಡರಾತ್ರಿ ಬಂಧಿಸಿದ್ದಾರೆ. ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ನಟನನ್ನು ಬಾಕರಾವುಪೇಟೆ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ಮನೋಜ್ ಮಂಚು ಪೊಲೀಸ್ ಅಧಿಕಾರಿಗಳೊಂದಿಗೆ ಮಾತನಾಡುತ್ತಿರುವ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ನಟ ಇತ್ತೀಚೆಗೆ ತಮ್ಮ ತಂದೆ ಮೋಹನ್ ಬಾಬು ಅವರೊಂದಿಗಿನ ಕೌಟುಂಬಿಕ ವಿಚಾರದಲ್ಲಿ ಸುದ್ದಿಯಲ್ಲಿದ್ದರು.

ಮಂಚು ಮನೋಜ್ ಮತ್ತು ಅವರ ಪತ್ನಿ ಭುಮಾ ಮೌನಿಕಾ ಅವರು ತಿರುಪತಿಗೆ ತೆರಳಿದ್ದರು. ಅಲ್ಲಿನ ಚಂದ್ರಗಿರಿಯಲ್ಲಿ ನಡೆದ ಜಲ್ಲಿಕಟ್ಟು ಆಚರಣೆಯಲ್ಲಿ ಅವರು ಪಾಲ್ಗೊಂಡರು. ಆ ಸಮಾರಂಭಕ್ಕೆ ಮಂಚು ಮನೋಜ್ ಅವರು ಮುಖ್ಯ ಅತಿಥಿ ಆಗಿದ್ದರು. ಟಿಡಿಪಿ ಮತ್ತು ಜನಸೇನಾ ಪಕ್ಷದ ಬೆಂಬಲಿಗರಿಂದ ಮಂಚು ಮನೋಜ್ ಅವರಿಗೆ ಸ್ವಾಗತ ಕೋರಲಾಗಿತ್ತು. ಆದರೆ ನಂತರ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದು ಕುತೂಹಲಕ್ಕೆ ಕಾರಣವಾಗಿದೆ.
ಪೊಲೀಸರು ವಶಕ್ಕೆ ಪಡೆದ ಬಳಿಕ ನಟ ಕೆಲವರಿಗೆ ಮೊಬೈಲ್ ಮೂಲಕ ಕರೆಮಾಡಿ ಮಾತನಾಡಿದ್ದಾರೆ ಎನ್ನಲಾಗಿದೆ. ಯಾವ ಆರೋಪ ಅವರ ಬಂಧನಕ್ಕೆ ಕಾರಣವಾಗಿದೆ ಎಂಬುದು ಇನ್ನಷ್ಟೇ ತಿಳಿಯಬೇಕಿದೆ.