ಬೆಂಗಳೂರು, ಫೆ.18 (DaijiworldNews/AK): ರಾಜ್ಯದ ಕಾಂಗ್ರೆಸ್ ಸರಕಾರವು ಅಭಿವೃದ್ಧಿಶೂನ್ಯತೆ ಮತ್ತು ಒಳಜಗಳ- ಕಚ್ಚಾಟಗಳ ಕಾರಣಕ್ಕೆ ಪ್ರಚಾರದಲ್ಲಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ವ್ಯಂಗ್ಯವಾಡಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ” ದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸರಕಾರ ಈ ಒಳ್ಳೆಯ ಕೆಲಸ ಮಾಡಿದೆ ಎಂದು ಮಾತನಾಡಬೇಕಿತ್ತು. ಪರಿಸ್ಥಿತಿ ಬದಲಾಗಿದೆ. ರಾಜ್ಯದ ಅನುಭವಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಅಸಹಾಯಕರಾಗಿದ್ದಾರೆ. ಸರಕಾರ ಗ್ಯಾರಂಟಿ ಹಣ ಕೊಟ್ಟಿಲ್ಲ; ಅಕ್ಕಿ ಸಿಕ್ಕಿಲ್ಲ; 2 ಸಾವಿರ ರೂ. ಆರು ತಿಂಗಳಿನಿಂದ ಬಂದಿಲ್ಲ. ಆರು ತಿಂಗಳಿನಿಂದ ವಂಚನೆ ಆಗಿದೆ ಎಂದು ಮಾತನಾಡುವ ಪರಿಸ್ಥಿತಿ ಬಂದಿದೆ ಎಂದು ಟೀಕಿಸಿದರು.
ಅಧಿಕಾರಕ್ಕಾಗಿ, ಮುಖ್ಯಮಂತ್ರಿ ಯಾರಾಗಬೇಕೆಂಬ ಕಚ್ಚಾಟ, ಕಿತ್ತಾಟ ಮುಂದುವರೆದಿದೆ. ಅದರಲ್ಲೂ ಇನ್ನೊಂದು ರೀತಿಯ ಪ್ರಚಾರದಲ್ಲಿ ಈ ಸರಕಾರ ಇದೆ ಎಂದು ಅವರು ಆಕ್ಷೇಪಿಸಿದರು. ಬೆಟ್ಟಿಂಗ್ ದಂಧೆಯಲ್ಲಿ ಇವತ್ತು 3 ಜನರ ಪ್ರಾಣತ್ಯಾಗ ಆಗಿದೆ. ಆನ್ಲೈನ್ ಬೆಟ್ಟಿಂಗ್ ದಂಧೆ ಅವ್ಯಾಹತವಾಗಿ ರಾಜ್ಯದಲ್ಲಿ ನಡೆಯುತ್ತಿದೆ ಎಂದು ದೂರಿದರು.ಇದರ ಕಡೆ ಗಮನ ಹರಿಸಲು ಸರಕಾರಕ್ಕೆ ಸಮಯವೇ ಇಲ್ಲ; ಸರಕಾರ ನಡೆಸುವವರೇ ಈ ದಂಧೆಯಲ್ಲಿ ಪಾಲುದಾರರು ಎಂದು ಬಹಳ ಜನರು ಮಾತನಾಡುತ್ತಿದ್ದಾರೆ ಎಂದು ತಿಳಿಸಿದರು.