ಬೆಂಗಳೂರು, ಫೆ.18 (DaijiworldNews/AK):ಜಾತಿ ಗಣತಿ ವರದಿಯು ವೈಜ್ಞಾನಿಕವಾಗಿ ನಡೆದಿದ್ದು ಅದನ್ನು ನಮ್ಮ ಸರ್ಕಾರ ಖಂಡಿತವಾಗಿಯೂ ಜಾರಿಗೊಳಿಸುತ್ತದೆ ಇದರಲ್ಲಿ ಯಾವುದೇ ಸಂಶಯ ಬೇಡ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ .

ಹಿಂದುಳಿದ ವರ್ಗಗಳ ಮುಖಂಡರು ಹಾಗೂ ಹಿಂದುಳಿದ ವರ್ಗಗಳ ಸಂಘ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ವಿಧಾನಸೌಧದಲ್ಲಿ ಇಂದು ನಡೆದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಜಾತಿ ಗಣತಿ ಅನುಷ್ಠಾನಕ್ಕೆ ಸಭೆಯಲ್ಲಿ ಒಕ್ಕೊರಲಿನಿಂದ ಒತ್ತಾಯ ಬಂದ ಸಂದರ್ಭದಲ್ಲಿ ಅದಕ್ಕೆ ಮುಖ್ಯಮಂತ್ರಿಗಳು ಪ್ರತಿಕ್ರಿಯೆ ನೀಡಿದರು.
ಸರ್ಕಾರ ಜಾತಿ ಗಣತಿ ಪರವಾಗಿದೆ . ನಮ್ಮ ಸರ್ಕಾರ ಜಾತಿ ಗಣತಿ ವರದಿಯನ್ನು ಸ್ವೀಕರಿಸಿದೆ. ಮುಂದಿನ ದಿನಗಳಲ್ಲಿ ಅದನ್ನು ಖಂಡಿತವಾಗಿಯೂ ಜಾರಿ ಮಾಡಲಾಗುತ್ತದೆ ಅದರ ಬಗ್ಗೆ ಅನುಮಾನ ಬೇಡ ಎಂದು ತಿಳಿಸಿದರು.
ತಮಿಳು ನಾಡು ಮಾದರಿಯಲ್ಲಿ ಮೀಸಲಾತಿ ಹೆಚ್ಚಳಕ್ಕೆ ಸಭೆ ಆಗ್ರಹಿಸಿದಾಗ 1992 ರ ಇಂದಿರಾ ಸಹಾನಿ ಕೇಸನ್ನು ಉಲ್ಲೇಖಿಸಿ ಮೀಸಲಾತಿ ಶೇಕಡ 50ರಷ್ಟು ಮೀರಬಾರದು ಎನ್ನುವ ಅಂಶವನ್ನು ಸಭೆಗೆ ತಿಳಿಸುತ್ತಾ, ಕಳೆದ ಸರ್ಕಾರದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಎಂದು ( EWS) ಮೀಸಲಾತಿ ಕಲ್ಪಿಸಿದ್ದು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ.ಸಂವಿಧಾನದ ಆರ್ಟಿಕಲ್ ( 15)(16)ರ ಪ್ರಕಾರ ಮೀಸಲಾತಿ ನೀಡಬೇಕಾಗಿರುವುದು ಸಾಮಾಜಿಕವಾಗಿ ಶೈಕ್ಷಣಿಕವಾಗಿ ಹಿಂದುಳಿದವರಿಗೆ ಮಾತ್ರ ನೀಡಬೇಕು ಎಂದಿದೆ .
ಜಾತಿ ಗಣತಿಯ ವರದಿ ವೈಜ್ಞಾನಿಕವಾಗಿ ತಯಾರಾಗಿದ್ದು ಸಮಾಜದ ಎಲ್ಲಾ ವರ್ಗಗಳ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸ್ಥಿತಿಗತಿ ತಿಳಿಯಲು ಅನುಕೂಲ ವಾಗಿದೆ. ಆ ಪ್ರಕಾರ ಸರ್ಕಾರದ ಕಾರ್ಯಕ್ರಮಗಳನ್ನು ರೂಪಿಸಲು ಸಹಕಾರಿಯಾಗುತ್ತದೆ ಎಂದರು.ಇಷ್ಟು ವರ್ಷಗಳಾದರೂ ಸಮಾನತೆ ಯಾಕೆ ಬಂದಿರುವುದಿಲ್ಲ ಎಂಬುದು ಮುಖ್ಯ. ಕೆಲವರು ತಪ್ಪು ಗ್ರಹಿಕೆಯಿಂದ ಅದನ್ನು ವಿರೋಧಿಸುತ್ತಿದ್ದಾರೆ ಎಂದರು.