ಬೆಂಗಳೂರು, ಫೆ.19 (DaijiworldNews/AA): ಕಾಂಗ್ರೆಸ್ ಸರ್ಕಾರ ರಾಜ್ಯದ ಜನರ ಸಮಸ್ಯೆ ಬಗ್ಗೆ ಚರ್ಚೆ ಮಾಡುತ್ತಿಲ್ಲ ಎಂದು ಸರ್ಕಾರದ ವಿರುದ್ಧ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.

4-5 ತಿಂಗಳಿಂದ ಅನ್ನಭಾಗ್ಯ, ಗೃಹಲಕ್ಷ್ಮಿ ಹಣ ಬಾರದ ವಿಚಾರವಾಗಿ ಮಾತನಾಡಿದ ಅವರು, ಈ ಸರ್ಕಾರದವರು ರಾಜ್ಯದ ಜನರ ಸಮಸ್ಯೆ ಬಗ್ಗೆ ಚರ್ಚೆ ಮಾಡುತ್ತಿಲ್ಲ. ಮಾಧ್ಯಮಗಳು ಸುದ್ದಿ ಮಾಡಿದರೆ ಮಾಧ್ಯಮಗಳಿಗೆ ಕೆಲಸ ಇಲ್ಲ ಎನ್ನುತ್ತಾರೆ. ಈ ಸರ್ಕಾರ ಯಾವ ತರಹ ನಡೆಯುತ್ತಿದೆ ಎಂದು ನೋಡುತ್ತಿದ್ದೇನೆ ಎಂದು ಹೇಳಿದರು.
ಇನ್ನೊಂದು ವಾರ ಕಳೆಯಲಿ. ಹಲವಾರು ವಿಷಯಗಳ ಬಗ್ಗೆ ಚರ್ಚೆ ಮಾಡೋಣ. ನಮಗೂ ರಾಜ್ಯದ ವಿಷಯಗಳ ಬಗ್ಗೆ ನಮ್ಮದೇ ಆದ ಕಮಿಟ್ಮೆಂಟ್ ಇಟ್ಟುಕೊಂಡಿದ್ದೇವೆ. ಇವರು ಯಾರಿಂದಲೂ ನಾವು ಹೇಳಿಸಿಕೊಳ್ಳಬೇಕಿಲ್ಲ ಎಂದರು.
ನೀರಾವರಿ ವಿಚಾರದಲ್ಲಿ ದೇವೇಗೌಡರು ಮೋದಿಯವರ ಚಿಯರ್ ಲೀಡರ್ ಆಗೋದು ಬೇಡ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಸಿದ್ದರಾಮಯ್ಯರಿಂದ ದೇವೇಗೌಡರು ನೀರಾವರಿ, ರಾಜ್ಯದ ಜನತೆಯ ರಕ್ಷಣೆ ಮಾಡೋಕೆ ಇವರಿಂದ ಹೇಳಿಸಿಕೊಳ್ಳಬೇಕಿಲ್ಲ. ಸಿದ್ದರಾಮಯ್ಯ ಅವರೇ ಈ ರಾಜ್ಯದ ನೆಲ, ಜಲ, ಭಾಷೆ ವಿಚಾರದಲ್ಲಿ ನಿಮ್ಮ ಕೊಡುಗೆ ಏನು? ನೀರಾವರಿಗೆ ಸಿದ್ದರಾಮಯ್ಯ ಕೊಡುಗೆ ಏನು? ಯಾವತ್ತಾದ್ರು ಒಂದು ದಿನ ನೀರಿನ ಬಗ್ಗೆ ವಿಧಾನಸಭೆಯಲ್ಲಿ ಮಾತಾಡಿದ್ದಾರಾ? ಎಂದು ಪ್ರಶ್ನಿಸಿದರು.